ದೊಡ್ಡಬಳ್ಳಾಪುರ: ಮಾರಕವಾದ ನೀತಿ,ನಿಲುವುಗಳಿಂದ ದೇಶಕ್ಕೆ ಕಂಟವಾಗುತ್ತಿರುವ ಬಿಜೆಪಿ ಪಕ್ಷವನ್ನು ಕರೊನಾ ಸೋಂಕಿನ ಮಾದರಿಯಲ್ಲಿ ದೇಶದಿಂದ ಹೊರ ಹಾಕಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು.ಭೂ ಸೂಧಾರಣ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳು ಜನ ವಿರೋಧಿಯಾಗಿದ್ದು,ಕಾಯ್ದೆ ತಿದ್ದುಪಡಿ ಮಾಡಿದರೆ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂ ಸೂಧಾರಣ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳು ಜನ ವಿರೋಧಿಯಾಗಿವೆ. ಇವುಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು.
ದೇವರಾಜ್ ಅರಸು ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಉಳುವವನೇ ಭೂ ಒಡೆಯ ಎಂದು ಘೋಷಿಸಿದ್ದರು. ಕೃಷಿ ಹಾಗೂ ರೈತರ ಪರವಾಗಿರುವ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿರುವ ಬಿಜೆಪಿ ಸರ್ಕಾರ, ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಭೂಮಿ ನೀಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಹೇಮಂತರಾಜ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥರೆಡ್ಡಿ ಮಾತನಾಡಿದರು.
ಈ ವೇಳೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ತಾಪಂ ಸದಸ್ಯ ಡಿ.ಸಿ.ಶಶಿಧರ್, ನಗರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಎನ್.ಅಂಜನಮೂರ್ತಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿಅನಂತರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿತ್ಯ ನಾಗೇಶ್, ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಪ್ರಭಾವತಿ, ಎಸ್ಸಿ ಘಟಕದ ಅಧ್ಯಕ್ಷ ಮುನಿರಾಜ್, ಎಸ್ಟಿ ಘಟಕದ ಅಧ್ಯಕ್ಷ ಭೀಮಣ್ಣ, ಎಪಿಎಂಸಿ ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ಅಪ್ಪಿ ವೆಂಕಟೇಶ್, ಕೃಷ್ಣಮೂರ್ತಿ, ರೇಣುಕಮ್ಮ, ಕುಮುದಾ, ಲೋಕೇಶ್ ಮತ್ತಿತರಿದ್ದರು.