ದೊಡ್ಡಬಳ್ಳಾಪುರ: ಅಂಧತ್ವನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಶ್ರಮ ಎಲ್ಲರಿಗೂ ಮಾದರಿಯಾಗಿದೆ.ಬಡ ಕುಟುಂಬದ ಅಂಧ ಮಕ್ಕಳಿಗೆ ನಾರಾಯಣ ನೇತ್ರಾಲಯದಲ್ಲಿ ಉಚಿತವಾಗಿ ಕಣ್ಣು ನೀಡುವುದಲ್ಲದೆ, ಮಕ್ಕಳಿಗೆ ಎಸ್‌ಎಸ್‌ಎಲ್‌ಸಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಅಭಿಷೇಕ್ ನೇತ್ರಧಾಮದ ನೇತ್ರ ಸಂಗ್ರಹಣಾ ಮುಖ್ಯಸ್ಥರಾದ ಎಂ.ಬಿ.ಗುರುದೇವ್ ಭರವಸೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ(ಪ್ರವಿಣ್‌ಕುಮಾರ್ ಶೆಟ್ಟಿ ಬಣ) ನೇತೃತ್ವದಲ್ಲಿ ನಗರದ ರಂಗಪ್ಪ ವೃತ್ತದಲ್ಲಿರುವ ಅಭಿಷೇಕ್ ನೇತ್ರಧಾಮದ ಆವರಣದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ ವಿಶೇಷ ಚೇತನರಿಗೆ ನಡೆದ ಸಹಾಯ ಧನ ವಿತರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅತಿ ಕಡಿಮೆ ಅವಯಲ್ಲಿ ನಗರದ ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ ದೊಡ್ಡಬಳ್ಳಾಪುರದಲ್ಲಿ ಸುಮಾರು 1,464 ನೇತ್ರಗಳನ್ನು ಸಂಗ್ರಹ ಮಾಡಿರುವುದು ದೇಶ ಮಟ್ಟದ ಸಾಧನೆಯಾಗಿದೆ. ದೇಶದ ಅತಿ ದೊಡ್ಡ ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ನೇತ್ರ ದಾನ ಮಾಡಿರುವವರ ಸಂಖ್ಯೆ ನೂರರ ಅಂತರದಲ್ಲೆ ಇದೆ. ಆದರೆ 1ಲಕ್ಷ ಜನ ಸಂಖ್ಯೆ ಇರುವ ದೊಡ್ಡಬಳ್ಳಾಪುರದಲ್ಲಿ 1,464 ನೇತ್ರದಾನ ನಡೆದಿರುವುದು ರಾಷ್ಟ್ರ ಮಟ್ಟದ ಸಾಧನೆಯಾಗಿದೆ. ಇಂತಹ ಸಂದರ್ಭದಲ್ಲಿ ಎರಡು ಕೈ ಇಲ್ಲದವರು ಅಂಧ ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸಿ ಸಾಧನೆ ಮಾಡಿರುವುದು ವಿಶೇಷ ಸಾಧನೆಯೆಂದೆ ಪರಿಗಣಿಸ ಬೇಕಾಗಾಗುತ್ತದೆ ಎಂದರು.
ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ,ಎಲ್ಲಾ ಅಂಗಾಂಗಗಳು ಸರಿಯಿದ್ದರೂ ಸಾಧನೆಯ ಹಾದಿಯಲ್ಲಿ ಸಾಗುವುದು ಸಾಧ್ಯವಾಗದ ಸ್ಥಿತಿಯಲ್ಲಿ, ಅಂಗ ವೈಪಲ್ಯವನ್ನೂ ಮೀರಿ ಸಾಧನೆ ಮಾಡಿ ನಮಗೂ ಮಾರ್ಗದರ್ಶಕರಾಗಿರುವ ಇಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯವಾಗಿದ್ದು,ಇವರ ಸಾಧನೆ ಇತರರಿಗೆ ಮಾದರಿಯಾಗಲಿ ಎಂದರು.
ಸನ್ಮಾನಿತ ವಿಶೇಷ ಚೇತನ ಸಾಧಕರು ;
ಎರಡೂ ಕೈಗಳು ಇಲ್ಲದ ವಿಕಲಚೇತನ ವಿದ್ಯಾರ್ಥಿನಿ ಸಮೀನಾ ಕಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣಳಾಗಿದ್ದಾಳೆ. ಇವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದೇ ರೀತಿ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಡಶಾಲೆಯ ಸರ್ಕಾರಿ ಪ್ರೌಡಶಾಲೆಯ ಅಂಧ ವಿದ್ಯಾರ್ಥಿನಿ ಕನಿಶಿಖಾ, ಬ್ರೈಲ್ ಲಿಪಿಯಲ್ಲೇ ವ್ಯಾಸಂಗ ಮಾಡಿ ಪರೀಕ್ಷೆ ಬರೆದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 475 ಅಂಕಗಳನ್ನು ಪಡೆದಿದ್ದಾಳೆ. ಶಿಡ್ಲಘಟ್ಟದ ಅಶಾ ಕಿರಣ ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ದೊಡ್ಡಬಳ್ಳಾಪುರದ ರಾಜೀವ್‌ಗಾಂಧಿ ಆಶ್ರಯ ಕಾಲೋನಿಯ ಅಂಧ ವಿದ್ಯಾರ್ಥಿನಿ ವಿ.ಪುಷ್ಪಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 513 ಅಂಕಗಳನ್ನು ಪಡೆದಿದ್ದಾಳೆ. ಈ ಮೂರು ಮಂದಿ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ, ಸಹಾಯ ದನ ನೀಡಲಾಯಿತು.
ಈ ಸಂದರ್ಭದಲ್ಲಿ ಕರವೇ ಪ್ರವೀಣ್‌ಕುಮಾರ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಹೆಚ್.ಎಸ್.ವೆಂಕಟೇಶ್,ಉಪಾಧ್ಯಕ್ಷ ವಕೀಲ ಮಲ್ಲಾತಹಳ್ಳಿ ಆನಂದ್, ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್ ವೇಣು,ಗೌರವಾಧ್ಯಕ್ಷ ಪು.ಮಹೇಶ್,ವೈದ್ಯಕೀಯ ಘಟಕದ ತಾಲೂಕು ಅಧ್ಯಕ್ಷ ಡಾ.ಹರೀಶ್,ಮುಖಂಡರಾದ ಅಮ್ಮ,ಬಷೀರ್, ಸುಬ್ರಮಣಿ,ಸೂರಿ ಸೇರಿದಂತೆ ಇತರರು ಇದ್ದರು.