ಬೆಂಗಳೂರು: ನಗರಕ್ಕೆ ಪರ್ಯಯವಾಗಿ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು “ನವ ಬೆಂಗಳೂರು” ಎಂದು ಘೋಷಿಸಿ, ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ನೀಡಿ ಅಭಿವೃದ್ಧಿ ಮಾಡಬೇಕು ಎಂದು ಜಿಲ್ಲೆಯ ಜನಪ್ರತಿನಿಧಿಗಳು ಉಸ್ತುವಾರಿ ಸಚಿವ ಆರ್.ಅಶೋಕ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಸಹ ಅವರ ಇಚ್ಛಾಶಕ್ತಿ ಕೊರತೆಯಿಂದ ಪ್ರಸ್ತುತ ಬಜೆಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ನವ ಬೆಂಗಳೂರು ಹೋರಾಟ ಸಮಿತಿಯ ಮುಖಂಡ ಸತ್ಯಪ್ರಕಾಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಜೆಟ್ – 2021ರ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು, ಬೆಂ.ಗ್ರಾ.ಜಿಲ್ಲೆಗೆ ಸಂಬಂಧಿಸಿದಂತೆ ಹಿಂದಿನ ಬಜೆಟ್‌ಗಳಲ್ಲಿನ ಘೋಷಣೆಗಳೇ ಇನ್ನೂ ಅನುದಾನ ಬಿಡುಗಡೆಯಾಗದೆ ನೆನೆಗುದಿಗೆ ಬಿದ್ಸಿವೆ. ಅದೇ ರೀತಿ ಈ ಬಾರಿ ಕೂಡ ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ. ಅದರಲ್ಲೂ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಅನ್ಯಾಯದ ಇತಿಹಾಸ ಮರುಕಳಿಸಿದೆ.
ಬೆಂಗಳೂರು ನಗರಕ್ಕೆ ಪರ್ಯಾಯ ನಗರದ ಅನಿವಾರ್ಯತೆಯ ಗಂಭೀರತೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಕಂದಾಯ ಸಚಿವರಿಗೆ ಹಾಗೂ ಜಿಲ್ಲೆಯ ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಸಹ ಕಂದಾಯ ಸಚಿವರು ಹಾಗೂ ಜಿಲ್ಲೆಯ ಶಾಸಕರು ಕನಿಷ್ಠ ಪ್ರಯತ್ನವಾಗಿ ಪ್ರಾಥಮಿಕ ಹಂತದಲ್ಲಿಯೇ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ” ನವ ಬೆಂಗಳೂರು ” ಪರಿಕಲ್ಪನೆಯ ಸಾಕಾರತೆ ರಾಜ್ಯದ ಆರ್ಥಿಕ ಉನ್ನತಿಗೆ ಎಷ್ಟು ಅನಿವಾರ್ಯ ಅಂತ ಸರ್ಕಾರಕ್ಕೆ ಅರಿವಾಗುತ್ತದೆ.
“ನವ ಬೆಂಗಳೂರು” ಸಾಕಾರ ಮಾಡಿಯೇ ತೀರುತ್ತೇವೆ. ಇದಕ್ಕಾಗಿ ನಾವು ಎಂತಹ ತ್ಯಾಗಕ್ಕಾದರೂ ಸಿದ್ಧರಿದ್ದೇವೆ. ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ “ನವ ಬೆಂಗಳೂರು ಹೋರಾಟ ಸಮಿತಿ”ಯ ಪರಮ ಗುರಿ. ಅದರ ಸಲುವಾಗಿಯೇ ಈ ಹೋರಾಟ. ” ನವ ಬೆಂಗಳೂರು ” ಪರಿಕಲ್ಪನೆಯ ಸಾಕಾರಕ್ಕಾಗಿ ಇನ್ನು ಮುಂದೆ ಹೋರಾಟದ ದಾರಿ ಅನಿವಾರ್ಯವಾಗಿದೆ. ಸರ್ಕಾರ ನಮ್ಮ ಜಿಲ್ಲೆಯನ್ನು “ನವ ಬೆಂಗಳೂರು” ಎಂದು ಘೋಷಿಸಿ ಅಭಿವೃದ್ಧಿಪಡಿಸುವವರೆಗೂ ವಿಶ್ರಮಿಸುವುದಿಲ್ಲ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..