ದೊಡ್ಡಬಳ್ಳಾಪುರ: ಲಾಕ್‍ಡೌನ್ ಕಾರಣ ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಸಮಸ್ಯೆಗೆ ಒಳಗಾಗಿರುವ ಕುಟುಂಬಗಳಿಗೆ, ಗ್ರಾಮಪಂಚಾಯಿತಿ ವತಿಯಿಂದ ಆಹಾರ ಕಿಟ್ ನೀಡಲು ಮುಂದಾಗಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಿದರು.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೋವಿಡ್-19 ಸೋಂಕಿನ ಸ್ಥಿತಿಗತಿ ಕುರಿತಂತೆ, ನಗರದ ತಾಲೂಕುಪಂಚಾಯಿತಿ ಹಿಂಭಾಗದಲ್ಲಿನ ಸಾಮರ್ಥ್ಯ ಸೌದದಲ್ಲಿ ನಡೆದ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕರೊನಾ ಮೊದಲ ಅಲೇ ನಿರ್ವಹಣೆಯಲ್ಲಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾತ್ರ ಅಪಾರವಾಗಿದೆ. ಎರಡನೇ ಅಲೆಯಲ್ಲಿ ಕೋವಿಡ್ ಸೋಂಕು ತಾಲೂಕನ್ನು ವ್ಯಾಪಕವಾಗಿ ಕಾಡುತ್ತಿದ್ದು, ಪ್ರಸ್ತುತ ಅಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ. ಆದರೂ ಹಳ್ಳಿಗಳಲ್ಲಿ ಸೋಂಕು ಹರಡದಂತೆ ಹೆಚ್ಚಿನ ಗಮನ ಹರಿಸಬೇಕಿಸಬೇಕಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಆಧ್ಯತೆ, ಲಾಕ್‍ಡೌನ್ ನಿಂದ ಸಮಸ್ಯೆಗೆ ಒಳಗಾಗಿರುವವರಿಗೆ ಆಹಾರ ಕಿಟ್ ವಿತರಿಸಲು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ತ್ವರಿತವಾಗಿ ನೆರವಾಗಬೇಕೆಂದರು.
ಇದೇ ವೇಳೆ ಗ್ರಾಮಪಂಚಾಯಿತಿ ವಾರು ಸೋಂಕಿತ ಪ್ರಕರಣಗಳ ಅಂಕಿಅಂಶಗಳ ವರದಿ ಪಡೆದರು.
ಇಒ ಮುರುಡಯ್ಯ ಮಾತನಾಡಿ, ಕೋವಿಡ್ ತಡೆಗಟ್ಟಲು ಗ್ರಾಮಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಬಹಳಷ್ಟು ಶ್ರಮಿಸುತ್ತಿದ್ದಾರೆ. ಕೋವಿಡ್ ನಿರ್ವಹಣೆಗೆ 14ನೇ ಹಣಕಾಸು ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯನ್ನು ಬಳಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪಿಡಿಒಗಳು ಮುಂದಾಗಬೇಕಿದೆ.
ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತಾಲೂಕು ಪಂಚಾಯಿತಿವತಿಯಿಂದ ಕೊಳವೆ ಬಾವಿ ಕೊರೆಸಲು ಅನುದಾನ ಸಿದ್ದವಿದ್ದು, ಆದ್ಯತೆ ಇರುವ ಗ್ರಾಮಗಳ ಪಟ್ಟಿ ನೀಡುವಂತೆ ಮುರುಡಯ್ಯ ಸೂಚಿಸಿದರು.
ಸಭೆಯಲ್ಲಿ ತಹಶಿಲ್ದಾರ್ ಟಿ.ಎಸ್.ಶಿವರಾಜ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….