ದೊಡ್ಡಬಳ್ಳಾಪುರ: ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ನಟ ಚೇತನ್ ವಿರುದ್ಧ ಕದಂಬ ಬ್ರಿಗೇಡ್ ನಿಂದ ನಗರದ ಡಿವೈಎಸ್ಪಿ ಕಚೇರಿಗೆ ದೂರು ನೀಡಲಾಗಿದೆ.
ಇತ್ತೀಚೆಗೆ ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯದ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಕದಂಬ ಬ್ರಿಗೇಡ್ ವತಿಯಿಂದ ದೂರು ದಾಖಲಿಸಲಾಗಿದೆ. ಇದರ ಜೊತೆಗೆ ಚೇತನ್ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣತ್ವದ ವಿರುದ್ಧ ಅಸಂಬದ್ಧ ಹ್ಯಾಷ್‌ಟ್ಯಾಗ್ ಗಳ ಮೂಲಕ ಅಭಿಯಾನ ನಡೆಸಿದ ರಾಷ್ಟ್ರೀಯ ಮುಸ್ಲಿಂ ಮೋರ್ಚಾ ಸಂಘಟನೆಯ ವಿರುದ್ಧವೂ ಸಹ ದೂರು ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕದಂಬ ಬ್ರಿಗೇಡ್ ನ ಸಂಸ್ಥಾಪಕ ಜಿ.ಎನ್.ಪ್ರದೀಪ್, ಭಾರತದಲ್ಲಿ ದಶಕಗಳಿಂದಲೂ ಆಂತರಿಕ ಶತೃಗಳು ದಿನೇ ದಿನೇ ದೇಶದ ಕೋಮು ಸೌಹಾರ್ದತೆ ಕೆಡಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ನಟ ಚೇತನ್ ಹಾಗೂ ರಾಷ್ಟ್ರೀಯ ಮುಸ್ಲಿಂ ಮೋರ್ಚಾ ಹೆಸರಿನ ಸಂಘಟನೆಯು ಬ್ರಾಹ್ಮಣ್ಯದ ವಿರುದ್ಧ ಅಸಂಬದ್ಧ ಹೇಳಿಕೆ ನೀಡುವ, ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರಿತವಾಗಿ ಸುಳ್ಳು ವಿಷಯಗಳನ್ನು ಪಸರಿಸುವ ಮೂಲಕ ಶಾಂತಿಯಿಂದಿರುವ ಸಮಾಜದಲ್ಲಿ ಕೋಮುಭಾವನೆ ಕೆಡಿಸುವ ಪ್ರಯತ್ನ ಮಾಡಿರುವುದಲ್ಲದೆ, ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಆದ್ದರಿಂದ ಇಂತಹ ಸಂಕುಚಿತ ಮನೋಭಾವದ ಕನಿಷ್ಠರಿಗೆ ಕಾನೂನು ರೀತ್ಯಾ ಬುದ್ಧಿ ಕಲಿಸುವ ಉದ್ದೇಶದಿಂದ ಸಂಘದ ಕಾನೂನು ಸಲಹೆಗಾರಾದ ಟಿ.ಕೆ.ಹನುಮಂತರಾಜು ಬಳಿ ಚರ್ಚಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ದಲಿತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ್, ದೇಶದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹಾಗೂ ದಲಿತರ ಹೆಸರನ್ನು ದುರ್ಬಳಕೆ ಮಾಡಿಕೊಂಡು ದೇಶದ ಸಾರ್ವಭೌತ್ವಕ್ಕೆ ಧಕ್ಕೆ ತರುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ. ನಿಜವಾದ ದಲಿತರು ಯಾವತ್ತೂ ದೇಶದ ಸಾಂಸ್ಕೃತಿಕ ಹಿನ್ನೆಲೆಯನ್ನಾಗಲೀ, ಯಾವ ಧರ್ಮವನ್ನೇ ಆಗಲೀ ದೂಷಿಸಲಿಲ್ಲ. ಆದರೆ ಕೆಲವು ಕಿಡಿಗೇಡಿ ಮನಸ್ಥಿತಿಯವರು ದೇಶದ ಐಕ್ಯತೆಗೆ ಧಕ್ಕೆ ತರಲು ಮಹಾಪುರುಷರ ಮತ್ತು ಸಮುದಾಯದ ಹೆಸರನ್ನು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ. ಇಂತಹ ಮನಸ್ಥಿತಿಯ ವ್ಯಕ್ತಿಗಳ ಹಾಗೂ ಸಂಘಟನೆಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುವುದು ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….