ದೊಡ್ಡಬಳ್ಳಾಪುರ: ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳ ಎರಡನೇ ಹಾಗೂ ಅಂತಿಮ ದಿನದಂದು ಭಾಷಾ ವಿಷಯಗಳ ಪರೀಕ್ಷೆ ತಾಲೂಕಿನಲ್ಲಿ ಸುಗಮವಾಗಿ ನಡೆದಿದ್ದು, ಯಾವುದೇ ಪರೀಕ್ಷಾ ಅಕ್ರಮಗಳ ಕುರಿತು ವರದಿಯಾಗಿಲ್ಲ.
ಒಟ್ಟು 28 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ಬಾರಿ ಪರೀಕ್ಷೆ ತೆಗೆದುಕೊಂಡ 3,593 ವಿದ್ಯಾರ್ಥಿಗಳ ಪೈಕಿ ಒಟ್ಟು 3593 ವಿದ್ಯಾರ್ಥಿಗಳು ಸಹ ಹಾಜರಾಗಿದ್ದಾರೆ.
ಐಚ್ಛಿಕ ವಿಷಯಗಳ ಪರೀಕ್ಷೆಗೆ ಗೈರು ಹಾಜರಾಗಿದ್ದ ಒಬ್ಬ ವಿದ್ಯಾರ್ಥಿ ಸಹ ಗುರುವಾರ ಪರೀಕ್ಷೆ ಬರೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಶುಭಮಂಗಳ ತಿಳಿಸಿದ್ದಾರೆ.
ಪುರಾವರ್ತಿತ ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳಿಗೆ ಒಬ್ಬರು ಗೈರಾಗಿದ್ದಾರೆ. 92 ಖಾಸಗಿ ಅಭ್ಯರ್ಥಿಗಳ ಪೈಕಿ ಒಬ್ಬರು ಗೈರಾಗಿದ್ದಾರೆ. 11 ಎನ್‍ಎಸ್‍ಆರ್ ವಿದ್ಯಾರ್ಥಿಗಳು, 31 ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡ 13 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಗುರುವಾರ ನಡೆದ ಪರೀಕ್ಷೆಯಲ್ಲಿಯೂ ಕೊವಿಡ್ ಸೋಂಕಿತರಿಗೆ ಪ್ರತ್ಯೇಕ ಕೊಠಡಿಗಳನ್ನು ಮೀಸಲಿರಿಸಲಾಗಿತ್ತು. ದೊಡ್ಡಬೆಳವಂಗಲ ಪರೀಕ್ಷಾ ಕೇಂದ್ರದಲ್ಲಿ ಅನಾರೋಗ್ಯಗೊಂಡ ಒಬ್ಬ ವಿದ್ಯಾರ್ಥಿ ಮಾತ್ರ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾನೆ.
ಇಂದು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳ ಪರೀಕ್ಷೆ ನಡೆದಿದ್ದು, ವಿದ್ಯಾರ್ಥಿಗಳು ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರವನ್ನು ಓ.ಎಂ.ಆರ್. ಹಾಳೆಗಳಲ್ಲಿ ಉತ್ತರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಮೊದಲ ದಿನದಂತೆ ಕೊವಿಡ್ ಮುಂಜಾಗ್ರತೆಗಳನ್ನು ಕೈಗೊಂಡು ಪರೀಕ್ಷೆಯನ್ನು ನಡೆಸಲಾಯಿತು.
ಪರೀಕ್ಷಾರ್ಥಿಗಳಿಗೆ ಎನರ್ಜಿ ಡ್ರಿಂಕ್ಸ್ ವಿತರಿಸಿದ ವಿದ್ಯಾಧಾರೆ ಗೆಳೆಯರ ಬಳಗ: ವಿದ್ಯಾಧಾರೆ ಗೆಳೆಯರ ಬಳಗದ ವತಿಯಿಂದ ಸಾಸಲು ಹೋಬಳಿಯ SSLC ಪರೀಕ್ಷಾರ್ಥಿಗಳಿಗೆ ಎನರ್ಜಿ ಡ್ರಿಂಕ್ಸ್ ವಿತರಣೆ ಮಾಡಲಾಯಿತು.
ತಾಲೂಕಿನ ಸಾಸಲು ಹೋಬಳಿಯ ಚೆನ್ನವೀರನಹಳ್ಳಿ ಸರ್ಕಾರಿ ಪ್ರೌಢಶಾಲೆ, ಸಾಸಲು ಅನುದಾನಿತ ಪ್ರೌಢಶಾಲೆ, ಆರೂಢಿಯ ಅನುದಾನಿತ ಪ್ರೌಢಶಾಲೆ ಹಾಗೂ ಹೊಸಹಳ್ಳಿ ಪ್ರೌಢಶಾಲೆಯ 10ನೇ ತರಗತಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಖಾಸಗಿ ಸಂಸ್ಥೆಯ ನೆರವಿನಿಂದ ಎನರ್ಜಿ ಡ್ರಿಂಕ್ಸ್ ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..