ಚಿಕ್ಕಬಳ್ಳಾಪುರ: ಮಂಗಳವಾರ ರಾತ್ರಿ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ನಂದಿ ಗಿರಿಧಾಮದ ಬಳಿ ಭೂಕುಸಿತ ಉಂಟಾಗಿ ನಂದಿಗಿರಿಧಾಮಕ್ಕೆ ಸಾಗುವ ರಸ್ತೆಗೆ ಒಂದು ಸ್ಥಳದಲ್ಲಿ ಹಾನಿಯಾಗಿದ್ದು.ಶಾಶ್ವತವಾಗಿ ರಸ್ತೆ ಪುನರ್ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ನಂದಿ ಗಿರಿಧಾಮದಲ್ಲಿ ಭೂಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಹೆಚ್ಚಿನ ಪ್ರಮಾಣದಲ್ಲಿ ನಿನ್ನೆ ರಾತ್ರಿ ಮಳೆ ಸುರಿದ ಪರಿಣಾಮ ಬೆಟ್ಟದ ಮೇಲಿನಿಂದ ನೀರು ಒಂದೇ ಭಾಗದಲ್ಲಿ ಇಳಿಜಾರಾಗಿ ನಿರಂತರವಾಗಿ ಹರಿಯುವ ವೇಳೆ ಒಂದೇ ಕಡೆ ನೀರು ಸಂಗ್ರಹಗೊಂಡಿದ್ದರ ಪರಿಣಾಮ ಅಲ್ಲಿದ್ದ ಮಣ್ಣು ಹಾಗೂ ಚಿಕ್ಕ ಗುಡ್ಡ ಇಳಿಮುಖವಾಗಿ ಕುಸಿದ ರಭಸ ಹಾಗೂ ಒತ್ತಡಕ್ಕೆ ನಂದಿಗಿರಿಧಾಮಕ್ಕೆ ಸಾಗುವ ರಸ್ತೆಗೆ ಒಂದು ಕಡೆ ಹಾನಿಯುಂಟಾಗಿದೆ. ಅಲ್ಲಿದ್ದ ಮರಗಿಡಗಳು ನಾಶವಾಗಿವೆ. ಭೂ ಕುಸಿತವಾದ ಕಾರಣ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.ಇಂದೇ ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಿ ಬೆಟ್ಟದ ಮೇಲಿರುವ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗುತ್ತಿದೆ.
ಮತ್ತೆ ಭೂ ಕುಸಿತ ಉಂಟಾಗದಂತೆ ತಡೆಗೋಡೆ ನಿರ್ಮಾಣ, ನೀರು ಹರಿಯಲು ವ್ಯವಸ್ಥೆ ಹಾಗೂ ಕಲ್ವರ್ಟ್ ನ್ನು ಮುಂದಿನ ಹದಿನೈದು ರಿಂದ ಇಪ್ಪತ್ತು ದಿವಸಗಳ ಒಳಗಡೆ ನಿರ್ಮಿಸಿ ಶಾಶ್ವತವಾಗಿ ಸುರಕ್ಷಿತ ರಸ್ತೆಯನ್ನು ನಿರ್ಮಿಸಲಾಗುವುದು.
ರಸ್ತೆ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯವರಿಗೆ ಈಗಾಗಲೇ ಸೂಚಿಸಿದ್ದೇನೆ ಅವರೂ ಸಹ ಈಗಾಗಲೇ ಕೆಲಸವನ್ನು ಆರಂಭಿಸಿದ್ದಾರೆ.ತಡೆಗೋಡೆ ಹಾಗೂ ಶಾಶ್ವತವಾಗಿ ರಸ್ತೆ ನಿರ್ಮಾಣವಾಗುವವರೆಗೂ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ, ಜಿಲ್ಲಾ ಅರಣ್ಯಾಧಿಕಾರಿ ಅರ್ಸಲನ್, ನಂದಿಗಿರಿಧಾಮದ ವಿಶೇಷ ಅಧಿಕಾರಿ ಗೋಪಾಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….