ದೊಡ್ಡಬಳ್ಳಾಪುರ: ಕೇಂದ್ರ ಹಾಗೂ ರಾಜ್ಯದಂತೆ ದೊಡ್ಡಬಳ್ಳಾಪುರ ನಗರಸಭೆಯಲ್ಲಿಯೂ ಬಿಜೆಪಿ ಆಡಳಿತ ನಡೆಸಲಿದೆ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು (ಎಂಟಿಬಿ) ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಗರಸಭೆ ಚುನಾವಣೆ ಕುರಿತಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಅಡಿಯಲ್ಲಿ, ನಗರ ಸಭೆ ಚುನಾವಣೆಗೆ 30 ಸ್ಥಾನಗಳಲ್ಲಿ ಅಭ್ಯರ್ಥಿಗಳು ಸ್ಪರ್ದಿಸಿದ್ದು, ನಗರದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶ ಹೊಂದಿದ್ದಾರೆ.
ಸಮ್ಮಿಶ್ರ ಆಡಳಿತ ಅಭಿವೃದ್ಧಿಗೆ ಮಾರಕವಾಗಿದೆ. ಆದ ಕಾರಣ 18 ಅಭ್ಯರ್ಥಿಗಳು ಹಾಗೂ ಅದಕಿಂತ ಹೆಚ್ಚು ಮಂದಿ ಚುನಾಯಿತರಾಗಿ, ನಗರಸಭೆಯ ಚುಕ್ಕಾಣಿ ಹಿಡಿಯುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಉಳಿದ ಮೂರು ದಿನಗಳಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮುಖಂಡರಿಗೆ ತಿಳಿಸಿದರು.
ಕರೊನಾ ಸೋಂಕನ್ನು ನಿಗ್ರಹಿಸಲು ಪ್ರಧಾನಿ ಮೋದಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವ್ಯವಸ್ಥಿತ ಕ್ರಮ ಕೈಗೊಂಡಿದ್ದು, ವೈದ್ಯಕೀಯ ಸೌಲಭ್ಯಗಳನ್ನು ನೀಡಿದ್ದಾರೆ.
ಲಸಿಕೆ ಕಾರ್ಯ ರಾಜ್ಯದಲ್ಲಿ ಮೂರು ಕೋಟಿ ಮೀರಿದ್ದು, ಸೊಂಕಿನ ತಡೆಗೆ ಅನುಕೂಲವಾಗಿದೆ. ಕೋವಿಡ್ ಕಾರಣ ದೇಶದ ಆರ್ಥಿಕತೆ ಕುಸಿದಿದೆ. ಆದರೂ ದೇಶದ ಅಭಿವೃದ್ಧಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಶ್ರಮಿಸುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ತಾತ್ಕಾಲಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದು, ದೊಡ್ಡಬಳ್ಳಾಪುರ ನಗರಸಭೆ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಇಲಾಖೆವಾರು ಬೇಡಿಕೆಗಳ ಪಟ್ಟಿ ನೀಡಲು ಎಂಟಿಬಿ ಮುಖಂಡರಿಗೆ ಸೂಚನೆ ನೀಡಿದರು.
ಅನುದಾನ ತಡೆ ಹಾಗೂ ಜಿಲ್ಲಾಸ್ಪತ್ರೆ ಅನುಮೋದನೆ ವಿಳಂಬ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಾಗರಾಜ್, ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡಿಲ್ಲ, ದೊಡ್ಡಬಳ್ಳಾಪುರ ನಗರಸಭೆಗೆ ನೀಡಬೇಕಾದ ಅನುದಾನ ತಡೆಯೊಡ್ಡಿದ್ದರೆ ಬಿಡುಗಡೆ ಮಾಡಲಾಗುವುದು ಹಾಗೂ ಕೆಲವೇ ದಿನಗಳಲ್ಲಿ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಜಿಲ್ಲಾಸ್ಪತ್ರೆಗೆ ವಿಳಂಬಕ್ಕೆ ಕಾರಣವನ್ನು ಶಾಸಕ ಟಿ.ವೆಂಕಟರಮಣಯ್ಯರೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಎಂದರು.
ನಗರ ಘಟಕದ ಅಧ್ಯಕ್ಷ ಹೆಚ್.ಎಸ್.ಶಿವಶಂಕರ್ ಮಾತನಾಡಿ, ಟೆಂಡರ್ ಕರೆಯದೆ ನಿಯಮ ಉಲ್ಲಂಘನೆ ಮಾಡಿ ಕಾಮಗಾರಿಯನ್ನು ನೀಡಲು ಶಾಸಕರು ಮುಂದಾಗಿದ್ದರಿಂದ ಅನುದಾನವನ್ನು ಸರ್ಕಾರ ತಡೆಹಿಡಿದಿದೆ. ಇದನ್ನು ಮರೆಮಾಚಿ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣ ಸ್ವಾಮಿ, ತಾಲೂಕು ಅಧ್ಯಕ್ಷ ನಾಗರಾಜು, ರಾಜ್ಯಕಾರ್ಯಕಾರಣಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ಜಿಲ್ಲಾ ವಕ್ತಾರರಾದ ಪುಷ್ಪಾಶಿವಶಂಕರ್, ಮುಖಂಡರಾದ ವತ್ಸಲಾ, ಗೋಪಿ, ಮಂಜುನಾಥ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..