ಬೆಂ.ಗ್ರಾ.ಜಿಲ್ಲೆ: ದೊಡ್ಡಬಳ್ಳಾಪುರ ನಗರಸಭೆಯ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚುನಾವಣಾ ಪ್ರಚಾರವು ಮತದಾನ ಪ್ರಾರಂಭವಾಗುವ 48 ಗಂಟೆಗಳ ಮುಂಚೆ ಅಂದರೆ ಸೆಪ್ಟೆಂಬರ್ 1 ರಂದು ಬೆಳಿಗ್ಗೆ 7.00 ಗಂಟೆ ನಂತರ ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಇತರರು ಯಾವುದೇ ವಿಧದಲ್ಲಿ ಬಹಿರಂಗ ಚುನಾವಣಾ ಪ್ರಚಾರವನ್ನು ನಡೆಸುವುದು ನಿಷೇಧವೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 1ರ ಬೆಳಿಗ್ಗೆ 7.00 ಗಂಟೆಯ ನಂತರ ಮತದಾರರಲ್ಲದ ಬೆಂಬಲಿಗರು / ರಾಜಕೀಯ ಪಕ್ಷದ ಪದಾಧಿಕಾರಿಗಳು/ ಮುಖಂಡರುಗಳು / ಪಕ್ಷದ ಕಾರ್ಯಕರ್ತರು / ಮೆರವಣಿಗೆ ಕಾರ್ಯ ನಿರ್ವಹಿಸುವವರು / ಪ್ರಚಾರ ಕಾರ್ಯ ನಿರ್ವಹಿಸುವವರು ಮತ್ತಿತರರು ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ತಮ್ಮ ವಾಸ್ತವ್ಯ ಮುಂದುವರಿಸಿದಲ್ಲಿ ಚುನಾವಣೆಯ ಮುಕ್ತ ಮತ್ತು ನಿಷ್ಪಕ್ಷ ವಾತಾವರಣಕ್ಕೆ ಧಕ್ಕೆಯುಂಟಾಗುವ ಸಂಭವವಿರುವುದರಿಂದ, ದೊಡ್ಡಬಳ್ಳಾಪುರ ನಗರ ಸ್ಥಳೀಯ ಸಂಸ್ಥೆಯ ವಾರ್ಡಿನ ಮತದಾರರಲ್ಲದ ವ್ಯಕ್ತಿಗಳು ಆ ವ್ಯಾಪ್ತಿಯಿಂದ ಹೊರಗೆ ಹೋಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು, ಇಲ್ಲದಿದ್ದಲ್ಲಿ ಹೊರಗೆ ಕಳುಹಿಸುವ ಬಗ್ಗೆ ಅಗತ್ಯ ಕ್ರಮ ಜರುಗಿಸುವುದು.
ದೊಡ್ಡಬಳ್ಳಾಪುರ ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಗಳ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪ, ಸಮುದಾಯ ಭವನ, ಇತರ ಸ್ಥಳಗಳಲ್ಲಿ ಆ ನಗರ ಸ್ಥಳೀಯ ಸಂಸ್ಥೆ ವಾರ್ಡಿನ ವ್ಯಾಪ್ತಿಗೆ ಒಳಪಡದ ಮೇಲೆ ತಿಳಿಸಿದಂತಹ ವ್ಯಕ್ತಿಗಳು ಇದ್ದಾರೆಯೇ ಎಂಬ ಬಗ್ಗೆ ತಪಾಸಣೆ ಮಾಡಲಾಗುವುದು.
ದೊಡ್ಡಬಳ್ಳಾಪುರ ನಗರ ಸ್ಥಳೀಯ ಸಂಸ್ಥೆ ವಾರ್ಡಿನ ವ್ಯಾಪ್ತಿಯಲ್ಲಿರುವ ಪ್ರವಾಸಿಗರ ವಸತಿ ಗೃಹಗಳಲ್ಲಿ ಮತ್ತು ಪ್ರವಾಸ ಮಂದಿರದಲ್ಲಿ ಮೇಲೆ ತಿಳಿಸಿದಂತಹ ವ್ಯಕ್ತಿಗಳು ಇದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು ಹಾಗೂ ದೊಡ್ಡಬಳ್ಳಾಪುರ ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಗಳ ವ್ಯಾಪ್ತಿಯಲ್ಲಿ ಅನುಮಾನಸ್ಪದ ವಾಹನಗಳು ಹಾಗೂ ಜನರ ಸಂಚಾರದ ಮೇಲೆ ನಿಗಾವಹಿಸುವ ಮೂಲಕ ಯಾವುದೇ ರೀತಿಯಲ್ಲಿ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ಕ್ರಮ ವಹಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.3ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಡಿವೈಎಸ್ಪಿ ಟಿ.ರಂಗಪ್ಪ ಹಾಗೂ ಸಹಾಯ ಶಿರಸ್ತೆಧಾರ್ ಕಿರಣ್ ಕುಮಾರ್ ನಗರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿನ ಮತಗಟ್ಟೆಯನ್ನು ಪರಿಶೀಲನೆ ನಡೆಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..