ದೊಡ್ಡಬಳ್ಳಾಪುರ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿನ ಸದಸ್ಯರು ಶುದ್ಧವಾದ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಸಂಘವು ಉಳಿಯುತ್ತದೆ ಮತ್ತು ರೈತರಿಗೆ ಅನುಕೂಲವಾಗುತ್ತದೆ ಎಂದು ದೊಡ್ಡಬಳ್ಳಾಪುರದ ಹಾಲು ಶೀತಲ ಕೇಂದ್ರದ ಸಹಾಯಕ ವ್ಯವಸ್ಥಾಪಕ ಎಂ.ಇ.ಮುನಿರಾಜೇಗೌಡ ಹೇಳಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಮೋಪರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 2020 – 2021 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸದಸ್ಯರು ಶುದ್ಧವಾದ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಸಂಘವನ್ನು ಹೆಚ್ಚಿನ ಲಾಭದತ್ತ ಕೊಂಡೊಯ್ದರೆ ಸಂಘದಿಂದ ಹಾಗೂ ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ದೊಡ್ಡಬಳ್ಳಾಪುರದ ಶೀತಲ ಕೇಂದ್ರದ ವಿಸ್ತರಣಾಧಿಕಾರಿಗಳಾದ ಕೆ.ಕುಸುಮ ಮಾತನಾಡಿ, ಸಹಕಾರ ಸಂಘವು ಅಭಿವೃದ್ಧಿಯತ್ತ ಸಾಗಬೇಕಾದರೆ ಸಂಘಕ್ಕಕೆ ಹಾಲಿನ ಪೂರೈಕೆ ಹೆಚ್ಚಾಗಬೇಕು. ಹೈನುಗಾರಿಕೆಯಲ್ಲಿ ತೊಡಗಿಕೊಂಡರೆ ಯಾವುದೇ ನಷ್ಟ ಇಲ್ಲ. ರೈತ ಹೂ ಹಣ್ಣು ತರಕಾರಿ ಮತ್ತಿತರ ಬೆಳೆಗಳಿಗೆ ಹೋಲಿಕೆ ಮಾಡಿದರೆ ಹಾಲಿನ ಬೆಲೆ ನಿಜಕ್ಕೂ ಒಳ್ಳೆಯ ಬೆಲೆ ಇದೆ.
ರಾಸುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಗುಣಮಟ್ಟದ ಹಾಲನ್ನು ಪಡೆಯಲು ಅನುಕೂಲವಾಗುತ್ತದೆ. ಸಕಾಲದಲ್ಲಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಒಳ್ಳೆಯದು ಎಂದರು.
ಸಂಘದ ಮುಖ್ಯಕಾರ್ಯನಿರ್ವಾಹಕ ಡಾ.ಎಂ.ಚಿಕ್ಕಣ್ಣ ಮಾತನಾಡಿ, ಎಂಪಿಸಿಎಸ್ಗೆ ನೂತನ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕರ್ನಾಟಕ ಹಾಲು ಮಹಾಮಂಡಲದ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡಿಸಿದರೆ ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮುನಿಕೃಷ್ಣ ಅಧ್ಯಕ್ಷತೆಯನ್ನು ವಹಿಕೊಂಡಿದ್ದರು. ಉಪಾಧ್ಯಕ್ಷ ಎಂ.ರಾಮಪ್ಪ, ನಿರ್ದೇಶಕರಾದ ಎಂ.ಮಾರಪ್ಪ, ಕೃಷ್ಣಪ್ಪ, ಮುನಿಆಂಜಿನಪ್ಪ, ಹನುಮಂತಗೌಡ, ವೆಂಕಟಮ್ಮ, ವೆಂಕಟಲಕ್ಷ್ಮಮ್ಮ, ದಾಸಪ್ಪ, ಬಾಗ್ಯಮ್ಮ, ಅಕ್ಕಯಮ್ಮ, ಸಂಘದ ಮಾಜಿ ಅಧ್ಯಕ್ಷ ಹನುಮಂತಗೌಡ, ಮುಖಂಡರಾದ ರಾಮಾಂಜಿನಪ್ಪ, ಸಂಘದ ಹಾಲು ಪರೀಕ್ಷಕ ಎಂ.ಶರಣ್ ರಾಜ್, ಸಹಾಯಕ ಅರುಣ್ ಮತ್ತಿತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….