ಚಿಕ್ಕಬಳ್ಳಾಪುರ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಆ ಎಲ್ಲಾ ವಿವರನ್ನು ಪರಿಶೀಲಿಸಿ ಅಂಕಿ-ಅಂಶಗಳು ಮತ್ತು ಸಮಗ್ರ ಮಾಹಿತಿಯೊಂದಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಜಿಲ್ಲಾಡಳಿತದ ಸಂಬಂಧಪಟ್ಟ ಅಧಿಕಾರಗಳಿಗೆ ಸೂಚನೆ ನೀಡಿದರು.
ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಕಳೆದ 25-30 ವರ್ಷಗಳಿಂದ ಆಗದದೆ ಇರುವ ಮಳೆ ಈ ವರ್ಷ ಆಗಿದೆ. 2021ನೇ ಸಾಲಿನ ಅಕ್ಟೋಬರ್ ಅಂತ್ಯಕ್ಕೆ ವಾರ್ಷಿಕ ವಾಡಿಕೆ ಮಳೆ 731 ಮಿ.ಮೀ ಇದ್ದು, ವಾಸ್ತವಿಕವಾಗಿ 962 ಮಿ.ಮೀ ಮಳೆಯಾಗಿದೆ. ಅದರಲ್ಲೂ ಕಳೆದ ಒಂದು ವಾರದಿಂದ ಹೆಚ್ಚು ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ಕುರಿತು ಕೃಷಿ, ತೋಟಗಾರಿಕೆ, ಸಾಂಖಿಕ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆ ನಷ್ಟದ ಸ್ಥಳಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ ಮಳೆಯಿಂದ ಆಗಿರುವ ನಷ್ಟವನ್ನು ಅಂದಾಜು ಲೆಕ್ಕ ಹಾಕಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಶೀಘ್ರವಾಗಿ ಸರ್ಕಾರದಿಂದ ಹಣ ಮಂಜೂರು ಮಾಡಿಸಿ, ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ ನಗರದವರೆಗಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ 275 ಕೋಟಿಗಳ ಯೋಜನೆಯನ್ನು ಜಿಲ್ಲಾಡಳಿತ ರೂಪಿಸಿದ್ದು, ಈ ತಿಂಗಳ ಅಂತ್ಯದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ 6-7 ತಿಂಗಳಲ್ಲಿ ಗುಣಮಟ್ಟದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಎಂದರು.
ರೈತರಿಗೆ ಅರಿವು ಮೂಡಿಸಿ: ಕೃಷಿ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಹೆಚ್ಚಾಗಿ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಅಧಿಕಾರಿಗಳು ರೂಪಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ನಡೆಸಬೇಕು. ಪ್ರತಿಯೊಬ್ಬ ರೈತರಿಗೆ ಅರಿವು ಮೂಡಿಸಿ ಈ ಯೋಜನೆಗಳಡಿ ನೊಂದಣಿ ಮಾಡಿಸಬೇಕು. ಹವಾಮಾನ ವೈಪರಿತ್ಯಗಳು ಉಂಟಾದರೂ ರೈತರು ನಷ್ಟಕ್ಕೆ ಸಿಲುಕದಂತೆ ಕಾರ್ಯಕ್ರಮಗಳನ್ನು ಅನಷ್ಟಾನಗೊಳಿಸಬೇಕು ಎಂದರು.
ಜಿಲ್ಲಾಡಳಿತಕ್ಕೆ ಪ್ರಶಂಸೆಯ ಸುರಿಮಳೆ: ಜಿಲ್ಲೆಯಲ್ಲಿ ಕೋವಿಡ್-19ರ ಮೊದಲ ಡೋಸ್ ಲಸಿಕೆಯನ್ನು ಶೇ.87 ರಷ್ಟು ಜನರು ಪಡೆದಿದ್ದಾರೆ. ಶೇ.48 ರಷ್ಟು ಜನ 2ನೇ ಡೋಸ್ ಲಸಿಕೆಯನ್ನು ಪಡೆದಿರುತ್ತಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ಕಾಯಿಲೆ ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಸ್ಪಂದಿಸಿದೆ. ಬಡವರಿಗೆ ಆಶ್ರಯ ವಸತಿ ಯೋಜನೆಯಡಿ ನಿವೇಶನಗಳನ್ನು ಹಂಚಿಕೆ ಮಾಡಲು ಪರಿಣಾಮಕಾರಿಯಾಗಿ ಕಾರ್ಯೊನ್ಮುಖವಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಆಂದೋಲನ ಮಾಡಿ ಅರ್ಹರಿರುವ ಎಲ್ಲರಿಗೂ ಪಿಂಚಣಿ ಮಂಜೂರು ಮಾಡಿದೆ. ಅಧಿಕಾರಿಗಳೆಲ್ಲರೂ ತಂಡದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಯೋಜನೆಗಳನ್ನು ಸಮಾಜ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಸಲುವಾಗಿ ಸಾಕಷ್ಟು ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದರು.
ಜನರ ಮನೆ ಬಾಗಿಲಿಗೆ ತಲುಪಿವೆ: ಇಲಾಖಾವಾರು ಪ್ರತಿ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಗುರಿ ನೀಡಲಾಗಿದೆ. ಆ ಎಲ್ಲಾ ಗುರಿಗಳನ್ನು ಸಾಧಿಸಲು ಸಮಯವನ್ನು ನೀಡಿ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಇನ್ನಷ್ಟು ಬಿಗಿಯಾದ ಆಡಳಿತ ನೀಡಬೇಕು. ಬಡವರ, ಜನಪರ ಹಾಗೂ ರೈತರ ಕಲ್ಯಾಣ ಕಾರ್ಯಗಳು ಆಗಲಿಕ್ಕೆ ಸರ್ಕಾರದ ಏನೆಲ್ಲಾ ಯೋಜನೆಗಳಿವೆ ಆ ಎಲ್ಲಾ ಯೋಜನೆಗಳನ್ನು ಜಿಲ್ಲಾಡಳಿತ ಜನರ ಮನೆ ಬಾಗಿಲಿಗೆ ಪರಿಣಾಮಕಾರಿಯಾಗಿ ತಲುಪಿಸುತ್ತಾ ಇದೆ. ಮತ್ತಷ್ಟು ಪರಿಣಾಮಕಾರಿಯಾಗಿ ಜಿಲ್ಲಾಡಳಿತ ಚುಕ್ಕಾಣಿಯನ್ನು ಚುರುಕುಗೊಳಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಪದವಿ ಪೂರ್ವ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ರೈತರ ಮಕ್ಕಳ ವಿವರವನ್ನು ಒಂದು ತಿಂಗಳ ಒಳಗಾಗಿ ಸಲ್ಲಿಸಬೇಕು. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ರೈತರ ಮಕ್ಕಳಿಗೆ ತಲುಪಿಸಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
6 ತಿಂಗಳಲ್ಲಿ ನೊಂದಣಿ ಪೂರ್ಣಗೊಳಿಸಿ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಸ್ತುತ 13 ಲಕ್ಷ ಜನರನ್ನು ಜಿಲ್ಲೆಯಲ್ಲಿ ನೊಂದಾಯಿಸಬೇಕು. ಈವರೆಗೆ ಸುಮಾರು 2 ಲಕ್ಷ ಜನರನ್ನು ಮಾತ್ರ ನೊಂದಾಯಿಸಲಾಗಿದೆ. ಈ ಯೋಜನೆಯನ್ನು ಅಭಿಯಾನದ ರೀತಿಯಲ್ಲಿ ಕೈಗೊಂಡು ಮುಂದಿನ 6 ತಿಂಗಳ ಒಳಗಾಗಿ ಉಳಿದ 11 ಲಕ್ಷ ಜನರನ್ನು ಈ ಯೋಜನೆಯಡಿ ಒಳಪಡಿಸಿ ನೊಂದಾಯಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಿದರು.
ಕೋವಿಡ್ ನಿಂದ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಜಿಲ್ಲೆಯ 12 ಮಕ್ಕಳಿಗೆ ಬಾಲ ಸೇವಾ ಯೋಜನೆಯಡಿ ವಿಶೇಷ ಕಾಳಜಿ ವಹಿಸಿ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕು. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಮಟ್ಟದ ಭವನಗಳ ನಿರ್ಮಾಣಕ್ಕೆ ಒತ್ತು: ಜಿಲ್ಲಾ ಕೇಂದ್ರದಲ್ಲಿ ಹಲವಾರು ಜಿಲ್ಲಾ ಮಟ್ಟದ ಭವನಗಳನ್ನು ನಿರ್ಮಿಸಬೇಕಾಗಿದೆ. ಮುಂದಿನ 2 ತಿಂಗಳ ಒಳಗಾಗಿ ಜಿಲ್ಲಾ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯ ನೆರವೇರಿಸಬೇಕು. 3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣವಾಗಬೇಕು. ಅಲ್ಲದೇ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ, ದೇವರಾಜು ಅರಸ್ ಭವನ ಹಾಗೂ ಕನಕ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಮತ್ತು ಮುದ್ರ ಯೋಜನೆಗಳಡಿ ಸಾಲ ವಿತರಣೆ ಸಮರ್ಪಕವಾಗಿ ಆಗಬೇಕು. ವಿವಿಧ ಇಲಾಖೆಗಳಿಂದ ಶಿಪಾರಸ್ಸುಗೊಂಡಿರುವ ಫಲಾನುಭವಿಗಳಿಗೆ ಎಷ್ಟು ಸಾಲ ಮಂಜೂರಾಗಿದೆ, ಎಷ್ಟು ಬಾಕಿ ಇದೆ ಎಂಬ ಮಾಹಿತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಒಂದೆರಡು ದಿನಗಳಲ್ಲಿ ಪಡೆದು ಬಾಕಿಯಿರುವ ಸಾಲ ವಿತರಣೆ ಕಾರ್ಯವನ್ನು ಕೈಗೊಳ್ಳುವಂತೆ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ವೇಳೆ ನಗರ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಅನುಕಂಪದ ಆಧಾರದ ಮೇಲೆ ನೇಮಕವಾದ ಸರ್ಕಾರಿ ನೌಕರರಿಗೆ ನೇಮಕಾತಿ ಆದೇಶ ಪತ್ರಗಳನ್ನು ಸಚಿವರು ವಿತರಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..