ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಹೊರಟಿರುವ ರಾಜ್ಯ ಸರ್ಕಾರ ಅದನ್ನು ಸಮರ್ಥವಾಗಿ ಜಾರಿ ಮಾಡಬೇಕು ಎಂದಾದರೆ ರಾಜ್ಯದ ಪ್ರತಿ ಹಳ್ಳಿಯಲ್ಲೂ ಗೋಶಾಲೆ ತೆರಯಬೇಕಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಗೋಶಾಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಕಾನೂನು ಸೇವಾ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ ಜಿಲ್ಲೆಗೊಂದು ಗೋಶಾಲೆ ತೆರೆಯಲು ನಿರ್ಧರಿಸಿದೆ ಎಂದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಪೀಠ, ಇಡೀ ಜಿಲ್ಲೆಗೆ ಒಂದು ಗೋಶಾಲೆ ತೆರೆದರೆ ಏನೂ ಸಾಕಾಗುವುದಿಲ್ಲ ಎಂದಿತು. ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು ಗೋಹತ್ಯೆ ನಿಷೇಧ ಕಾಯ್ದೆ ಅಡಿ ಗೋಶಾಲೆ ತೆರೆಯುವ ಪ್ರಸ್ತಾಪವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಮ್ಮ ಕಾಯ್ದೆಯನ್ನು ಸಮರ್ಥವಾಗಿ ಜಾರಿ ಮಾಡಬೇಕು ಎಂದಾದರೆ ಜಿಲ್ಲೆ ತಾಲೂಕಿಗಲ್ಲ. ಪ್ರತಿ ಹಳ್ಳಿಯಲ್ಲೂ ಗೋಶಾಲೆ ತೆರೆಯಬೇಕಾಗುತ್ತದೆ. ನೆರೆ ರಾಜ್ಯಗಳಲ್ಲಿ ಹೋಗಿ ನೋಡಿ, ಅಲ್ಲಿನ ಸರ್ಕಾರಗಳು ಪ್ರತಿ ಹಳ್ಳಿಯಲ್ಲೂ ಗೋಶಾಲೆ ತೆರೆದಿವೆ ಎಂದಿತು.
ಅರ್ಜಿಯ ಮುಂದಿನ ವಿಚಾರಣೆ ವೇಳೆ ರಾಜ್ಯದಲ್ಲಿ ಗೋಶಾಲೆ ಆರಂಭಿಸಲು ಮತ್ತು ನಿರ್ವಹಣೆ ಮಾಡಲು ಯಾವ ಮಾರ್ಗಸೂಚಿ ರೂಪಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ, ಬಿಡಾಡಿ ಪ್ರಾಣಿಗಳ ಕಲ್ಯಾಣಕ್ಕಾಗಿ ಯಾವುದಾದರೂ ಯೋಜನೆ ರೂಪಿಸಲಾಗಿದೆಯೇ ಎಂಬ ಕುರಿತೂ ವಿವರಣೆ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿತು ಎಂದು ಲೀಗಲ್ ನ್ಯೂಸ್ ವರದಿ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….