ಪ್ಯಾರಿಸ್, (ಆಗಸ್ಟ್.07); ಒಲಿಂಪಿಕ್ಸ್ನಲ್ಲಿ ಭಾರತದ ವಿನೇಶ್ ಫೋಗಟ್ ಅವರು ಇಂದು ರಾತ್ರಿ ನಡೆಯಬೇಕಿದ್ದ 50 ಕೆ.ಜಿ ವಿಭಾಗದ ಮಹಿಳೆಯರ ಕುಸ್ತಿಯ ಫೈನಲ್ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.
ಪಂದ್ಯಕ್ಕೂ ಮುನ್ನ ನಡೆಯುವ ತೂಕದ ಅಳತೆಯಲ್ಲಿ ವಿನೇಶ್ ಫೋಗಟ್ ಅವರಲ್ಲಿ 100ಗ್ರಾಂನಷ್ಟು ತೂಕ ಹೆಚ್ಚಿದೆ ಎಂದು ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಭಾರತಕ್ಕೆ ಪದಕ ನಷ್ಟವಾಗಿದೆ.
ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಬೀಜಿಂಗ್ ಒಲಿಂಪಿಕ್ಸ್ ಪದಕ ವಿಜೇತ ಮಾಜಿ ಬಾಕ್ಸರ್ ವಿಜೇಂದರ್ ಸಿಂಗ್, ‘ಭಾರತೀಯ ಕುಸ್ತಿಪಟು ವಿರುದ್ಧ ಭಾರಿ ದೊಡ್ಡ ಸಂಚು ನಡೆದಿದೆ’ ಎಂದು ಆರೋಪಿಸಿದ್ದಾರೆ.
ಭಾರಿ ದೊಡ್ಡ ಸಂಚು ನಡೆದಿದೆ. ವಿನೇಶ್ ಸ್ಪರ್ಧಿಸಿದ ರೀತಿ ನಿಜಕ್ಕೂ ಪ್ರಶಂಸನೀಯ. ಬಹುಶಃ ಕೆಲವರಿಗೆ ಅವರ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಜೇಂದರ್ ಹೇಳಿದ್ದಾರೆ.
ಒಂದೇ ರಾತ್ರಿಯಲ್ಲಿ ಐದರಿಂದ ಆರು ಕೆ.ಜಿಗಳಷ್ಟು ತೂಕ ಕಡಿಮೆ ಮಾಡಲು ಸಾಧ್ಯ. ಹಾಗಿರುವಾಗ 100ಗ್ರಾಂ ದೊಡ್ಡ ಸಮಸ್ಯೆಯೇ ಅಲ್ಲ. ಯಾರಿಗೋ ಏನೋ ಸಮಸ್ಯೆಯಿದೆ. ಆದ್ದರಿಂದ ಅನರ್ಹಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. 100 ಗ್ರಾಂ ತೂಕ ಕಡಿಮೆ ಮಾಡಲು ಆಕೆಗೆ ಅವಕಾಶ ಸಿಗಬೇಕಿತ್ತು ಎಂದು ಹೇಳಿದ್ದಾರೆ.
ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಓರ್ವ ಕ್ರೀಡಾಪಟುವಾಗಿ ನಾನೆಂದೂ ಇಂತಹ ಘಟನೆಯನ್ನು ಕಂಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
‘ವಿನೇಶಾ ಪ್ರಕರಣದಲ್ಲಿ ಮೇಲ್ಮನವಿ ಸಾಧ್ಯ. ಭಾರತ ಒಲಿಂಪಿಕ್ಸ್ ಸಂಸ್ಥೆಯು (ಐಒಎ) ಮೇಲ್ಮನವಿ ಸಲ್ಲಿಸಬೇಕು. 100 ಗ್ರಾಂ ಏನೂ ವಿಷಯ ಅಲ್ಲ. ತೂಕ ಇಳಿಸಿಕೊಳ್ಳಲು ಬಾಕ್ಸರ್ಗಳಿಗೆ ಒಂದು ತಾಸಿಗೂ ಹೆಚ್ಚು ಸಮಯ ನೀಡಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….