ಬೆಂಗಳೂರು: ಮೆಜೆಸ್ಟಿಕ್‌ಗೆ ಆಟೋದಲ್ಲಿ ಯುವತಿ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಕೇರಳ ಮೂಲದ ಶಾಲಿನಿ (24 ವರ್ಷ) ಮೃತಪಟ್ಟ ಯುವತಿ, ಆಟೋಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆನ್‌ಸನ್‌ಟೌನ್‌ನ ಚಿನ್ನಪ್ಪ ಗಾರ್ಡನ್‌ನಿಂದ ಶಾಲಿನಿ ಅವರು ಯಾತ್ರಿ ಆ್ಯಪ್ ಮೂಲಕ ಆಟೋ ಬುಕ್ ಮಾಡಿಕೊಂಡು ಮೆಜೆಸ್ಟಿಕ್ ಕಡೆಗೆ ಮುಂಜಾನೆ 4 ಗಂಟೆ ಸುಮಾರಿನಲ್ಲಿ ಹೋಗುತ್ತಿದ್ದರು.
ಪೊಲೀಸ್ ತಿಮ್ಮಯ್ಯ ಜಂಕ್ಷನ್ ಬಳಿ ಅತಿ ವೇಗವಾಗಿ ಸಿಗ್ನಲ್ ಜಂಪ್ ಮಾಡಿಕೊಂಡು ಬಂದ ಲೋಡ್ ಲಾರಿ ಏಕಾಏಕಿ ಆಟೋಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಯುವತಿ ಗಂಭೀರ ಗಾಯಗೊಂಡರು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆಟೋ ಚಾಲಕ ಇಮ್ರಾನ್ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ.
ಅಪಘಾತ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಕಬ್ಬನ್‌ಪಾರ್ಕ್ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಯುವತಿಯ ಮೃತದೇಹವನ್ನು ಬೋರಿಂಗ್ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿದ್ರೆ ಮಂಪರಿನಲ್ಲಿ ಅಪಘಾತ: ಅಪಘಾತದ ಬಳಿಕ ಕಾಲ್ಕಿತ್ತಿದ್ದ ಲಾರಿ ಚಾಲಕನ ಅಭಿಯನ್ನು ಸಂಚಾರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ನಿದ್ರೆ ಮಂಪರಿನಲ್ಲಿ ಅಪಘಾತ ಆಯಿತು ಎಂದು ಲಾರಿ ಚಾಲಕ ಹೇಳಿದ್ದಾನೆ. ಮೃತ ಶಾಲಿನ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಶನಿವಾರ ಬೆಳಗ್ಗೆ ಮೆಜೆಸ್ಟಿಕ್‌ಗೆ ತೆರಳುವಾಗ ಅಪಘಾತ ನಡೆದಿದೆ. ಘಟನೆಯಲ್ಲಿ ಆಟೋ ಪೂರ್ತಿ ಛಿದ್ರಗೊಂಡಿತ್ತು.