ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಹೆಸರಲ್ಲಿ ನಡೆಸಿರುವ ಜಾತಿಗಣತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬಾರದು ಎಂದು ರಾಜ್ಯ ಒಕ್ಕಲಿಗರ ಸಂಘ (vokkaligara sangha) ಒತ್ತಾಯಿಸಿದೆ.
ರಾಜ್ಯ ಎಲ್ಲಾ ಸಮುದಾಯಗಳಿಗೆ ಅನುಕೂಲವಾಗುವಂತೆ ಎಲ್ಲಾ ಜನವಸತಿಗಳಿಗೆ ಭೇಟಿ ನೀಡಿ ಹೊಸದಾಗಿ ಮರು ಸಮೀಕ್ಷೆ ನಡೆಸಬೇಕು ಎಂದು ಮತ್ತೊಮ್ಮೆ ಒತ್ತಾಯ ಮಾಡಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮತ್ತು ಪದಾಧಿಕಾರಿಗಳು, ಪ್ರತಿ ಮನೆಗೆ ಭೇಟಿ ನೀಡಿ ಅಗತ್ಯವಿರುವ ಮಾಹಿತಿ ಸಂಗ್ರಹಿಸಿ ವರದಿಯನ್ನು ಕಾಲಮಿತಿಯಲ್ಲಿ ಪಡೆಯಬೇಕು ಹಾಗೂ ಸಾರ್ವಜನಿಕವಾಗಿ ಮುಕ್ತ ಚರ್ಚೆಗೆ ಅವಕಾಶ ನೀಡಿದ ಬಳಿಕ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಜಾತಿಗಣತಿ ವರದಿ ಅನುಷ್ಠಾನ ಮಾಡಲು ನಮ್ಮ ಯಾವುದೇ ಆಕ್ಷೇಪವಿಲ್ಲ. ನಾವು (vokkaligara sangha) ಮುಕ್ತವಾಗಿ ಸ್ವಾಗತ ಮಾಡುತ್ತೇವೆ. ಆದರೆ ಎಲ್ಲಾ ಜನಾಂಗಕ್ಕೂ ಅನುಕೂಲವಾಗುವಂತೆ ವೈಜ್ಞಾನಿಕ ರೀತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮರು ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಬಹಳಷ್ಟು ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿಲ್ಲ ಎಂದು ಸಹಸ್ರಾರು ಪತ್ರಗಳು ಹಾಗೂ ದೂರವಾಣಿ ಕರೆಗಳು ರಾಜ್ಯ ಒಕ್ಕಲಿಗರ ಸಂಘಕ್ಕೆ (vokkaligara sangha) ಬಂದಿವೆ. ಹೀಗಾಗಿ ಈಗಾಗಲೇ ಎರಡು-ಮೂರು ಬಾರಿ ಸರ್ಕಾರಕ್ಕೆ ಹಾಗೂ ಹಿಂದುಳಿದ ವರ್ಗಗಳ ಆಯೋಗಕ್ಕೆ ಮರು ಸಮೀಕ್ಷೆ ನಡೆಸುವಂತೆ ಸಂಘದ ವತಿಯಿಂದ ಮನವಿ ಮಾಡಿದ್ದೇವೆ.
ಇದೇ ರೀತಿಯ ಒತ್ತಾಯವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಮಾಡಿದೆ. ಬೇರೆ ಬೇರೆ ಸಮುದಾಯದವರೂ ಮನವಿ ಮಾಡಿದ್ದಾರೆ. ಈ ಸಂಬಂಧದ ಮನವಿಗಳನ್ನು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಗಂಭೀರವಾಗಿ ಪರಿಗಣಿಸಿ ಗಮನಹರಿಸಬೇಕು. ಎಲ್ಲಾ ಸಮುದಾಯಗಳ ಏಳಿಗೆಗೆ ಅನುಕೂಲವಾಗುವಂತಹ ಜಾತಿಗಣತಿಯ ವರದಿ ಪಡೆದು ಅನುಷ್ಠಾನಗೊಳಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ಕೆಲವರ ಹಾಗೂ ಕೆಲವು ಸಂಘಟನೆಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು. ರಾಜಕೀಯ ದುರುದ್ದೇಶದಿಂದ ಜಾತಿಗಣತಿ ಅನುಷ್ಠಾನವಾಗಬಾರದು. ಸರ್ವಸಮ್ಮತವಾದ ವರದಿ ಅನುಷ್ಠಾನಗೊಳ್ಳಬೇಕು. ಒಂದು ವೇಳೆ ವೈಜ್ಞಾನಿಕ ವರದಿ ಪಡೆಯದೇ ಹಠಕ್ಕೆ ಬಿದ್ದು ಅವೈಜ್ಞಾನಿಕ ಹಾಗೂ ವಾಸ್ತವಕ್ಕೆ ದೂರವಿರುವ ವರದಿ ಅನುಷ್ಠಾನಕ್ಕೆ ಸರ್ಕಾರ ಮುಂದಾದರೆ ನಮ್ಮ ಸಂಘದ ನೇತೃತ್ವದದಲ್ಲಿ ಸಮಾಜದ ಇತರ ಸಂಘ-ಸಂಸ್ಥೆಗಳ ಜೊತೆಗೂಡಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ.
ಇಷ್ಟೇ ಅಲ್ಲ, ತಾಲ್ಲೂಕು ಮಟ್ಟದಲ್ಲೂ ತೀವ್ರವಾದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.