ಮಡಿಕೇರಿ: ಕೇರಳದ ಬಂದಡ್ಕದಲ್ಲಿ ನಡೆದ ಗಡಿನಾಡ ಅರೆಭಾಷೆ ಉತ್ಸವ ಊರಿಡೀ ಹಬ್ಬದ ವಾತಾವರಣ ಮೂಡಿಸಿತು. ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ನಡೆದ ಮೆರವಣಿಗೆಯಂತು ಇಡೀ ಕಾರ್ಯಕ್ರಮಕ್ಕೆ ಮುಕುಟವಿದ್ದಂತಿತ್ತು.
ಬಂದಡ್ಕದ ಆರ್ಟ್ ಆಫ್ ಲಿವಿಂಗ್ ಜ್ಞಾನ ಮಂದಿರದಿಂದ ಹೊರಟ ಮೆರವಣಿಗೆಯನ್ನು ಬಂದಡ್ಕದ ಹಿರಿಯ ವರ್ತಕರಾದ ಕೃಷ್ಣಪ್ಪ ಕೊೈಂಗಾಜೆ ಅವರು ಉದ್ಘಾಟನೆ ಮಾಡಿದರು.
ರವಿಪ್ರಸಾದ್ ಇಳಂದಿಲ ನಡೆಸಿಕೊಟ್ಟರು. ಬಂದಡ್ಕ ಪಟ್ಟಣದ ಮೂಲಕ ಸಾಗಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬಂದ ಮೆರವಣಿಗೆ ಊರಿಡಿ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು.
ಬಹಳ ಶಿಸ್ತಿನಿಂದ, ವೈಭವದಿಂದ ಸಾಗಿ ಬಂದ ಮೆರವಣಿಗೆಯು ಬಂದಡ್ಕ ಪಟ್ಟಣದಲ್ಲಿ ಜನರ ಕಣ್ಮನ ಸೆಳೆಯಿತು. ಗಂಡಸರು, ಹೆಂಗಸರು, ಮಕ್ಕಳು ಅರೆಭಾಷೆ ಅಕಾಡೆಮಿ ಲಾಂಛನದ ಭಾವುಟವನ್ನು ಬೀಸುತ್ತಾ ಸಾಗಿದರು. ಪೂರ್ಣಕುಂಭ ಹಿಡಿದ ಮಹಿಳೆಯರು ಜರತಾರಿ ಸೀರೆಯುಟ್ಟು ಕಂಗೊಳಿಸುತ್ತಿದ್ದರು.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಸಿಲ್ವಾ..?; ಈ ವರದಿ ಓದಿ
ಪುರುಷರು ಬಿಳಿ ಶರ್ಟು, ಬಿಳಿ ದೋತಿ, ಬಿಳಿ ಅಂಗವಸ್ತ್ರವನ್ನು ತೊಟ್ಟು ಗಂಭೀರ ಹೆಜ್ಜೆ ಹಾಕಿದರೆ, ಮಕ್ಕಳು ರಂಗುರಂಗಿನ ಉಡುಪು ತೊಟ್ಟು ಮಿಂಚುತ್ತಿದ್ದರು.
ಮೆರವಣಿಗೆಯಲ್ಲಿ ಬಣ್ಣದ ಕೊಡೆಗಳು ಹೊಳೆಯುತ್ತಿದ್ದವು. ಬಾಲಕ ಬಾಲಕಿಯರು ಮೆರವಣಿಗೆಯುದ್ದಕ್ಕೂ ಸಮವಸ್ತ್ರ ತೊಟ್ಟು ಕುಣಿತ ಭಜನೆ ಮಾಡಿದರು. ಕೋಲಾಟ ಆಡಿದರು. ಜನರ ಉತ್ಸಾಹ ಮುಗಿಲು ಮುಟ್ಟಿತು.
ತಮ್ಮದೇ ಮನೆಯ ಸಮಾರಂಭವೆಂಬಂತೆ ಊರಿಗೇ ಊರೇ ನೆರೆದಿತ್ತು. ಸುಮಾರು 300 ಕ್ಕಿಂತ ಅಧಿಕ ಮಂದಿಯನ್ನು ಹೊಂದಿದ್ದ ಫರ್ಲಾಂಗ್ ಗಟ್ಟಲೆ ಉದ್ದದ ಮೆರವಣಿಗೆಯನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬವಾಗಿತ್ತು. ಮುಂಚೂಣಿಯಲ್ಲಿದ್ದ ಬ್ಯಾಂಡ್ ವಾದನ ಲಯಬದ್ದ ಹೆಜ್ಜೆಗೆ ನಾಂದಿ ಹಾಡಿತು.
ಗಡಿನಾಡ ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅರೆಭಾಷೆ ಸಂಪ್ರದಾಯ ಬಿಂಬಿತವಾಯಿತು.
ಅಮರ ಸುಳ್ಯದ ಕ್ರಾಂತಿ, ಕೃಷಿ ಚಟುವಟಿಕೆಗಳು, ಆಟಿ ಕಳಂಜ, ದೀಪಾವಳಿ ಹಬ್ಬ, ಸಿದ್ಧವೇಷ ಕುಣಿತ, ವಾಲಗ ಕುಣಿತ, ಕೋಲಾಟ, ಎಲ್ಲವೂ ಪ್ರದರ್ಶನಗೊಂಡವು. ಉಳುಮೆಯ ಜೋಡೆತ್ತಿನ ಪ್ರದರ್ಶನ ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಅದರಂತೆ ಹೆಣ್ಣು ಮಗುವಿನ ಹುಟ್ಟಿನಿಂದ ಮದುವೆ ಮಾಡಿ ಕೊಡುವ ತನಕದ ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡ ಕಾರ್ಯಕ್ರಮ ಸೇರಿದಂತೆ ಊರವರು ಮತ್ತು ಆಹ್ವಾನಿತ ತಂಡಗಳ ಸಾಂಸ್ಕøತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಉದ್ದಕ್ಕೂ ನಡೆದವು.
ಕಾಸರಗೋಡು ಜಿಲ್ಲೆಯ ಉದುಮ ಕ್ಷೇತ್ರದ ಶಾಸಕ ಸಿ.ಎಚ್.ಕುಂಞಂಬು ಅವರು ಉದ್ಘಾಟಿಸಿ ಮಾತನಾಡಿ ಬಂದಡ್ಕ ಭಾಗದಲ್ಲಿ ಇಂತಹ ಉತ್ಸವ ನಡೆಸುತ್ತಿರುವುದು ಸಂತೋಷ. ಈ ಗಡಿಭಾಗದಲ್ಲಿ ಅರೆಭಾಷೆಯನ್ನು ಮಾತನಾಡುತ್ತಿದ್ದಾರೆ. ತುಳು ಅಕಾಡೆಮಿಯ ರೀತಿಯಲ್ಲಿ ಮಂಜೇಶ್ವರದಲ್ಲಿ ಯಕ್ಷಗಾನ ಅಕಾಡೆಮಿ ಆರಂಭ ಮಾಡಿ ಯಶಸ್ವಿಯಾಗಿದ್ದೇನೆ. ತುಳು, ಅರೆಭಾಷೆ, ಯಕ್ಷಗಾನ, ಬ್ಯಾರಿ ಸೇರಿದಂತೆ ಎಲ್ಲಾ ಅಕಾಡೆಮಿಗಳನ್ನು ಸೇರಿಸಿ ಕಾಸರಗೋಡಿನಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲು ಸಹಕರಿಸುವಂತೆ ಕೋರಿದರು.
‘ಪ್ರವಾಸಿ ತಾಣ ಕಾಸರಗೋಡು ಜಿಲ್ಲೆಯ ಬೇಕಲ ಕೋಟೆ ಮತ್ತು ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯ ಸಂಪರ್ಕಿಸುವ ನಿಟ್ಟಿನಲ್ಲಿ ಬೇಕಲ, ಬಂದಡ್ಕ, ಸುಳ್ಯ, ಸುಬ್ರಹ್ಮಣ್ಯ ಅಂತರರಾಜ್ಯ ಮಾರ್ಗದಲ್ಲಿ ಸರ್ಕಾರಿ ಬಸ್ ಸರ್ವೀಸ್ ಆರಂಬಿಸಲು ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಉದುಮ ಕ್ಷೇತ್ರದ ಶಾಸಕ ಸಿ.ಎಚ್.ಕುಂಞಂಬು ಅವರು ಸಮಾರೋಪ ಸಮಾರಂಭದಲ್ಲಿ ತಿಳಿಸಿದ್ದಾರೆ.’
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಬಂದಡ್ಕ ಗೌಡ ಗ್ರಾಮ ಸಮಿತಿಯ ವತಿಯಿಂದ ಬಂದಡ್ಕದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಮಂಟಪ ಸಭಾಭವನದಲ್ಲಿ ನಡೆದ ಅರೆಭಾಷೆ ಗಡಿನಾಡ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಂತಾರಾಜ್ಯ ಬಸ್ ಸರ್ವೀಸ್ ಆರಂಭಿಸಬೇಕು ಎಂದು ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗೂ ಬಂದಡ್ಕದ ಪ್ರಮುಖರು ಮನವಿ ಸಲ್ಲಿಸಿದರು. ಈ ಮಾರ್ಗದಲ್ಲಿ ಹೊಸ ಬಸ್ ಮಾರ್ಗ ಮಂಜೂರು ಮಾಡಿಸಿ ಸರ್ಕಾರಿ ಬಸ್ ಸೇವೆ ಕಲ್ಪಿಸುವಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.
ಸುಳ್ಯದಿಂದಲೂ ಬಸ್ ಆರಂಭ ಮಾಡುವಂತೆ ಪಿ.ಸಿ.ಜಯರಾಮ್, ಟಿ.ಎಂ.ಶಹೀದ್ ಅವರಿಗೆ ಇದೇ ವೇಳೆಯಲ್ಲಿ ಬಂದಡ್ಕದ ಪ್ರಮುಖರು ಮನವಿ ನೀಡಿದರು.
ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಅವರು ಮಾತನಾಡಿ ಹೊಸ ಹೊಸ ಸಾಧ್ಯತೆಗಳನ್ನು ಅರೆಭಾಷೆ ಅಕಾಡೆಮಿಯಿಂದ ಪ್ರಸ್ತುತಪಡಿಸಿದ್ದು, ಹೊಸ ಹೊಸ ಸಾಧ್ಯತೆಗಳನ್ನು ಅನ್ವೇಷಣೆ ಮಾಡಬೇಕಿದೆ ಎಂದರು.
ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಅವರು ಸಾಧಕರನ್ನು ಸನ್ಮಾನಿಸಿದರು. ಕರ್ನಾಟಕ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷರಾದ ಎ.ವಿ.ತೀರ್ಥರಾಮ ಬಹುಮಾನ ವಿತರಿಸಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಅರೆಭಾಷೆ ಗಡಿನಾಡ ಉತ್ಸವ ಸಂಘಟನಾ ಸಮಿತಿಯ ಅಧ್ಯಕ್ಷರಾದ ಕೊೈಂಗಾಜೆ ವೆಂಕಟ್ರಮಣ, ಪ್ರಧಾನ ಕಾರ್ಯದರ್ಶಿ ಚರಣ್ ಕುಮಾರ್ ಪಾಲಾರು ಮಾವಜಿ, ಕೋಶಾಧಿಕಾರಿ ಮೋಹನ್ ಇಳಂದಿಲ, ತರುಣ ಘಟಕದ ಅಧ್ಯಕ್ಷರಾದ ಗಣೇಶ್ ಪಾಲಾರುಮೂಲೆ, ಅಕಾಡೆಮಿ ಸದಸ್ಯರು ಇತರರು ಇದ್ದರು.