ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಿರುಚಿದ ನಕಲಿ ಪೋಟೋ ಬಳಸಿದ ಆರೋಪಡಿ ಬಿಜೆಪಿ ಬೆಂಬಲಿಗ ಪ್ರಶಾಂತ್ ಸಂಬರ್ಗಿ (Prashanth sambargi) ವಿರುದ್ಧ ನಟ ಪ್ರಕಾಶ್ ರಾಜ್ (Prakash raj) ದೂರು (FIR) ದಾಖಲಿಸಿದ್ದಾರೆ.
ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರಕಾಶ್ ರಾಜ್ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕಾಶ್ ರಾಜ್ ಅವರು ಪ್ರಶಾಂತ ಸಂಬರ್ಗಿ ಪ್ರಖ್ಯಾತರೋ ಕುಖ್ಯಾತರೋ ಗೊತ್ತಿಲ್ಲ. ಜನರ ನಂಬಿಕೆಗೆ ಅಘಾತ ಉಂಟು ಮಾಡುತ್ತಿದ್ದಾರೆ.
ಮಹಾ ಕುಂಭಮೇಳ ಅಂತಹ ಪುಣ್ಯದ ಸ್ನಾನ ನಡೆಯಬೇಕಾದರೆ ಅದರಲ್ಲಿ ಇವರು ರಾಜಕಾರಣ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಎಐ ತಂತ್ರಜ್ಞಾನ ಬಳಸಿಕೊಂಡು ತಮ್ಮ ಮೇಲೆ ದ್ವೇಷ ಹೆಚ್ಚಿಸುವಂತೆ ಅಪಪ್ರಚಾರ ಮಾಡುತ್ತಿದ್ದಾರೆ.
ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಅಭ್ಯಾಸವಾಗಿ ಬಿಟ್ಟಿದೆ. ಇದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ. ದ್ವೇಷವನ್ನು ಹರಡಿಸುತ್ತಿದ್ದಾರೆ. ಇವರು ನಿಜವಾದ ಧರ್ಮದವರಲ್ಲ ಫೇಕ್ ನ್ಯೂಸ್ ಸಮಾಜವನ್ನು ಹಾಳು ಮಾಡುತ್ತಿದೆ.
ಪದೇ ಪದೇ ಫೇಕ್ ನ್ಯೂಸ್ ನಿಂದಾಗಿ ಅನೇಕರ ಸಾವಿಗೆ ಕಾರಣವಾಗುತ್ತಿದ್ದಾರೆ.. ಈ ರೀತಿಯ ಫೇಕ್ ಸುದ್ದಿ ಹಬ್ಬಿಸುವವರಿಗೆ ಕಾನೂನಿದೆ, ಸುಳ್ಳು ಸುದ್ದಿ ಹಬ್ಬಿಸಿ ಮಾನಹರಣ ಮಾಡುತ್ತಿರುವ ಇಂತವರಿಗೆ ಕಠಿಣ ಕ್ರಮ ಆಗಬೇಕಿದೆ.
ಮೊದಲಿಂದ ಪ್ರಕಾಶ್ ರಾಜ್ ಹಿಂದು ವಿರೋಧಿ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿಕೊಂಡು ಬಂದಿದ್ದಾರೆ. ಅದರಂತೆಯೇ ಎಐ ಬಳಸಿ ನಾನು ಕುಂಭಮೇಳದಲ್ಲಿ ಸ್ನಾನ ಮಾಡುವಂತೆ ನಕಲಿ ಪೋಟೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಇವನ್ಯಾಕ್ ಬಂದ, ಇವಿನಗೇನು ಎಂಬಂತೆ ದ್ವೇಷ ಹುಟ್ಟಿಸುವ ಕೆಲವನ್ನು ಮಾಡುತ್ತಿದ್ದಾರೆ.
ನನ್ನ ವಿರುದ್ಧ ಸಾಕಷ್ಟು ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅವರ ಮೇಲೆ ಕೇಸ್ ಹಾಕಿ ಗೆದ್ದಿದ್ದೇನೆ. ಈ ಮುಂಚೆ ಇದೇ ರೀತಿ ಸುಳ್ಳು ಹೇಳಿದ್ದ ಪ್ರತಾಪ್ ಸಿಂಹರ ಕೋರ್ಟ್ ಕಟಕಟೆಗೆ ತಂದು ಕ್ಷಮೆ ಕೇಳುವವರೆಗೆ ಬಿಟ್ಟಿರಲಿಲ್ಲ.
ಯಾರಾದ್ರೂ ಸುಳ್ಳುಸುದ್ದಿಯನ್ನು ಪ್ರಶ್ನೆ ಮಾಡಬೇಕಲ್ವಾ.. ಇಲ್ವಾದ್ರೆ ಇದು ಮಾರಕವಾಗುತ್ತೆ. ಹೀಗಾಗಿ ನಾನು ಪ್ರಶಾಂತ ಸಂಬರ್ಗಿ ವಿರುದ್ಧ ದೂರು ನೀಡಿ ಎಫ್ ಐ ಆರ್ ಮಾಡಿಸಿದ್ದೇನೆ. 15 ದಿನಗಳಲ್ಲಿ ಆ ವ್ಯಕ್ತಿ ಠಾಣೆಗೆ ಬಂದು ಉತ್ತರ ನೀಡಬೇಕು. ಸತ್ಯಾಸತ್ಯತೆ ಎಲ್ಲರಿಗೂ ತಿಳಿಯಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಮಹಾಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್ ಸ್ನಾನ ಮಾಡ್ತಿರುವ ಹೋಲಿಕೆಯುಳ್ಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಚಿತ್ರವನ್ನು ಮೊದಲು ಹರಿಬಿಟ್ಟವರು ಪ್ರಶಾಂತ್ ಸಂಬರ್ಗಿ ಎಂದು ಅವರ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐ ಆರ್ ದಾಖಲು ಮಾಡಲಾಗಿದೆ.