ಬೆಂಗಳೂರು; “ಮೊದಲ ಹಂತದ ಟನಲ್ ರಸ್ತೆಗೆ ಟೆಂಡರ್ ಪ್ರಕ್ರಿಯೆ ಮುಂದಿನ 4-5 ದಿನಗಳಲ್ಲಿ ಅಂತಿಮಗೊಳ್ಳಲಿದೆ. ಮೊದಲ ಹಂತಕ್ಕೆ 17 ಸಾವಿರ ಕೋಟಿ, ಎರಡನೇ ಹಂತಕ್ಕೆ 23 ಸಾವಿರ ಕೋಟಿ ವ್ಯಯಿಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಹೇಳಿದರು.
ವಿಧಾನಸೌಧದಲ್ಲಿ ಸುದ್ದಿ ಸಂಸ್ಥೆಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
“ಹೆಬ್ಬಾಳ ಜಂಕ್ಷನ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಸುಮಾರು 40 ಕಿ.ಮೀ ಮತ್ತು 23 ಕಿ.ಮೀ ಉದ್ದದ ಮೈಸೂರು ರಸ್ತೆಯಿಂದ ಕೆ.ಆರ್.ಪುರದ ವರೆಗೆ ಟ್ವಿನ್ ಟನಲ್ ರಸ್ತೆ ನಿರ್ಮಾಣಕ್ಕೆ ನಾವು ಮುಂದಡಿ ಇಟ್ಟಿದ್ದೇವೆ” ಎಂದರು.
130 ಕಿ.ಮೀ ಮೇಲ್ಸೆತುವೆಗಳು, ನೂತನ ಮೆಟ್ರೋ ಮಾರ್ಗಗಳು ಹೋಗುವ ಕಡೆ ಡಬಲ್ ಡೆಕ್ಕರ್ ಗಳ ನಿರ್ಮಾಣ ಮಾಡಲಾಗುವುದು. ಈಗಾಗಲೇ 7 ಕಿ.ಮೀ ಡಬಲ್ ಡೆಕ್ಕರ್ ನಿರ್ಮಾಣ ಮಾಡಲಾಗಿದ್ದು, 37 ಕಿ.ಮೀ ಡಬಲ್ ಡೆಕ್ಕರ್ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಶೀಘ್ರದಲ್ಲೇ ಇದಕ್ಕೂ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗುವುದು. ರಾಜಕಾಲುವೆಗಳ ಪಕ್ಕದಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಾಣವೂ ನಮ್ಮ ಯೋಜನೆಯಲ್ಲಿ ಒಳಗೊಂಡಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆ ಎಂದರು.