ದೊಡ್ಡಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ – ಜೆಡಿಎಸ್ ಮೈತ್ರಿಗೆ ನಗರಸಭೆ ಚುಕ್ಕಾಣಿ ದೊರೆತಿದೆ.
ನಗರದ ನಗರಸಭೆಯ ಸಭಾಂಗಣದಲ್ಲಿ ಚುನಾವಣಾಧಿಕಾರಿಯಾಗಿ ಅರುಳ್ ಕುಮಾರ್ ಹಾಗೂ ಉಪ ಚುನಾವಣಾಧಿಕಾರಿಯಾಗಿ ಟಿ.ಎಸ್.ಶಿವರಾಜ್ ಪ್ರಕ್ರಿಯೆ ನಡೆಸಿದರು.
ಅಧ್ಯಕ್ಷ ಸ್ಥಾನ: ಬಿಜೆಪಿಯಿಂದ ಎಸ್.ಸುಧಾರಾಣಿ, ಕಾಂಗ್ರೆಸ್ ನಿಂದ ಎಸ್.ನಾಗವೇಣಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ನಾಮಿನಿ ಸದಸ್ಯ ಟಿ.ವೆಂಕಟರಮಣಯ್ಯ ಸೇರಿ 11 ಸದಸ್ಯರು ಕಾಂಗ್ರೆಸ್‌ನ ಎಸ್.ನಾಗವೇಣಿ ಪರ ಹಾಗೂ ನಾಮಿನಿ ಸದಸ್ಯ ಸಂಸದ ಬಚ್ಚೇಗೌಡ ಸೇರಿ 22 ಮಂದಿ ಸದಸ್ಯರು ಬಿಜೆಪಿಯ ಎಸ್.ಸುಧಾರಾಣಿ ಪರ ಕೈ ಎತ್ತುವ ಮೂಲಕ 11 ಮತಗಳ ಅಂತರದಿಂದ ಬಿಜೆಪಿಯ ಎಸ್.ಸುಧಾರಾಣಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
ಉಪಾಧ್ಯಕ್ಷ ಸ್ಥಾನ: ಕಾಂಗ್ರೆಸ್ ನಿಂದ ರಜನಿ, ಜೆಡಿಎಸ್ ನಿಂದ ಆದಿಲಕ್ಷ್ಮೀ, ಫರ್ಹಾನಾ ತಾಜ್, ಹಸೀನಾ ತಾಜ್, ಆರ್.ಪ್ರಭ ನಾಮಪತ್ರ ಸಲ್ಲಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಆದಿಲಕ್ಷ್ಮೀ, ಹಸೀನಾ ತಾಜ್, ಆರ್.ಪ್ರಭ ನಾಮಪತ್ರ ಹಿಂಪಡೆದರು.
ಅಂತಿಮ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನ ರಜನಿ ಎಂ.ಸುಬ್ರಮಣಿ, ಜೆಡಿಎಸ್ ನ ಫರ್ಹಾನಾ ತಾಜ್ ಸ್ಪರ್ಧಿಸಿದ್ದು, ನಾಮಿನಿ ಸದಸ್ಯ ಟಿ.ವೆಂಕಟರಮಣಯ್ಯ ಸೇರಿ 11 ಸದಸ್ಯರು ಕಾಂಗ್ರೆಸ್ ನ ರಜನಿ ಎಂ.ಸುಬ್ರಮಣಿ ಅವರ ಪರ, ನಾಮಿನಿ ಸದಸ್ಯ ಸಂಸದ ಬಚ್ಚೇಗೌಡ ಸೇರಿ 22 ಮಂದಿ ಸದಸ್ಯರು ಜೆಡಿಎಸ್ ನ ಫರ್ಹಾನಾ ತಾಜ್ ಪರ ಕೈ ಎತ್ತುವ ಮೂಲಕ 11 ಮತಗಳ ಅಂತರದಿಂದ ಫರ್ಹಾನಾ ತಾಜ್ ಅವರನ್ನು ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಮಾಡಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ನಗರಸಭೆ ಪೌರಾಯುಕ್ತ ರಮೇಶ್.ಎಸ್.ಸುಣಗಾರ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಸಂಸದ ಹಾಗೂ ಶಾಸಕ ನಾಮಿನಿ ಸದಸ್ಯರ ಹೊರತು ಪಡಿಸಿ 31 ಜನ ಸದಸ್ಯರನ್ನು ಹೊಂದಿರುವ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕು ಸ್ಪಷ್ಟ ಬಹುಮತ ಬರದೆ ಅತಂತ್ರವಾಗಿತ್ತು. ಬಿಜೆಪಿ 12, ಕಾಂಗ್ರೆಸ್ 9, ಜೆಡಿಎಸ್ 7 ಹಾಗೂ 3 ಜನ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡು ನಗರಸಭೆ ಚುಕ್ಕಾಣಿ ಹಿಡಿದಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….