ದೊಡ್ಡಬಳ್ಳಾಪುರ: ಹಿಂದಿನ ಸರ್ಕಾರದಲ್ಲಿ ಜಾರಿಗೊಳಿಸಲಾಗಿದ್ದ ಎತ್ತಿನಹೊಳೆ ಹಾಗೂ ಎಚ್.ಎನ್ ವ್ಯಾಲಿ ಶುದ್ದೀಕರಿಸಿದ ನೀರು ಯೋಜನೆಗಳು ಕಾರ್ಯಗತವಾದರೆ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲಾ ಕೆರೆಗಳು ಪೂರ್ಣವಾಗಿ ತುಂಬಲಿವೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಲಿಂಗನಹಳ್ಳಿ ಕೆರೆ ಕೋಡಿ ಹರಿದಿದ್ದ ಹಿನ್ನಲೆಯಲ್ಲಿ ಗಂಗಾ ಪೂಜೆ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಸುರಿದಿರುವ ಮಳೆಯಿಂದಾಗಿ ಸಾಕಷ್ಟು ಕೆರೆಗಳು ತುಂಬಿದ್ದರೂ ಸಹ ತಾಲೂಕಿನಲ್ಲಿ ಇನ್ನೂ ಶೇ.53ರಷ್ಟು ಕೆರೆಗಳು ತುಂಬಬೇಕಿದೆ. ಕೆರೆಗಳು ತುಂಬಿದಾಗ ಬಾಗಿನ ಅರ್ಪಿಸುವುದು, ಪೂಜೆ ನೆರವೇರಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಂತಸ ತಂದಿದೆ ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಹಿಂದಿನ ವರ್ಷಗಳಲ್ಲಿ ತಾಲೂಕಿನಲ್ಲಿ ನೀರಿನ ಸಮಸ್ಯೆ ತಲೆದೋರಿ, ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಬಂದಾಗಿನಿಂದ 180 ಕೊಳವೆ ಬಾವಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಈ ವರ್ಷ ವರುಣದೇವನ ಕೃಪೆಯಿಂದ ಸಾಕಷ್ಟು ಮಳೆಯಾಗಿ, ಕೆರೆಗಳಿಗೆ ನೀರು ಬಂದಿರುವುದು ಸಂತಸ ತಂದಿದೆ ತಾಲೂಕಿನ ಮಧುರೆ ಹೋಬಳಿ ಮೊದಲಾದ ಕೆರೆಗಳು ಇನ್ನೂ ತುಂಬಬೇಕಿವೆ. ಮಳೆ ಬೆಳೆ ಚೆನ್ನಾಗಿ ಆಗಿ ಜನರು ಸಂತುಷ್ಟಿಯಿಂದ ಇರಬೇಕೆಂದು ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಕೊನಘಟ್ಟ ಗ್ರಾ.ಪಂ ಅಧ್ಯಕ್ಷೆ ಮೊಹಿಸಿನಾ ತಾಜ್, ಉಪಾಧ್ಯಕ್ಷ ಸೋಮಶೇಖರ್, ಮುಖಂಡರಾದ ಕೆ.ಎಂ.ಕೃಷ್ಣಮೂರ್ತಿ, ಸೋಮರುದ್ರಶರ್ಮ, ಪಟೇಲ್ ಶಿವಣ್ಣ, ಶ್ರೀನಿವಾಸ್ ಮೊದಲಾದವರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….