ದೊಡ್ಡಬಳ್ಳಾಪುರ: ಬೆಂಗಳೂರು
ಗ್ರಾಮಾಂತರ ಜಿಲ್ಲೆಯ 2020-21ನೇ ಸಾಲಿನ ಜಿಲ್ಲಾ
ಸಾಲ ಯೋಜನೆಯನ್ನು ಜಿಲ್ಲಾ ಅಘ್ರಣೀಯ ಬ್ಯಾಂಕಾದ
ಕೆನರಾ ಬ್ಯಾಂಕ್ ವತಿಯಿಂದ ಹಾಗೂ
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಭಿವೃದ್ದಿ
ಬ್ಯಾಂಕಿನ (ನಬಾರ್ಡ್) ಸಹಯೋಗದೊಂದಿಗೆ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಎನ್.ಎಂ.ನಾಗರಾಜ ಬಿಡುಗಡೆಗೊಳಿಸಿದರು.
ಇದೇ ವೇಳೆ ಜಿಲ್ಲಾ ಸಾಲ
ಯೋಜನೆಯ ಬಗ್ಗೆ ಮಾಹಿತಿ ನೀಡಿದ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಎನ್.ಎಂ.ನಾಗರಾಜ , 2020-21ನೇ
ಸಾಲಿನ ಜಿಲ್ಲಾ ಸಾಲ ಯೋಜನೆಯು
ಸ್ಥಳೀಯ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳ ಆಧಾರದ
ಮೇಲೆ ಭೌತಿಕ ಸಾಮರ್ಥ್ಯಕ್ಕನುಗುಣವಾಗಿ ದೀರ್ಘ ಕಾಲಾವಧಿಯ
ಲಭ್ಯತೆಗೆ ಪೂರಕವಾಗುವಂತೆ ಜಿಲ್ಲಾ ಸಾಲ ಯೋಜನೆಯನ್ನು
ಒಟ್ಟು 3000 ಕೋಟಿ ರೂಪಾಯಿಗಳಿಗೆ ನಿಗದಿಗೊಳಿಸಲಾಗಿದ್ದು,
ಈ ವರ್ಷದ ಸಾಲ
ಯೋಜನೆಯು 2019-20ರ ಸಾಲಿಗಿಂತ ರೂ.
400 ಕೋಟಿ ಹೆಚ್ಚಿನ ಮೊತ್ತವನ್ನು ಹೊಂದಿದ್ದು,
ಆದ್ಯತಾ ವಲಯಕ್ಕೆ ರೂ. 2,700 ಕೋಟಿ
ಮೀಸಲಿಡಲಾಗಿದೆ ಎಂದು ಹೇಳಿದರು.
ಆದ್ಯತಾವಲಯದ
ಒಟ್ಟು ಮೊತ್ತದ ಶೇ. 79% ಅಂದರೆ
ರೂ.1685 ಕೋಟಿ ಮೊತ್ತವನ್ನು ಕೃಷಿ
ಕ್ಷೇತ್ರಕ್ಕೆ ಕಾಯ್ದಿರಿಸಲಾಗಿದ್ದು, ಸಣ್ಣ, ಅತಿಸಣ್ಣ ಮತ್ತು
ಮಧ್ಯಮ ಉದ್ಯಮಗಳಿಗೆ ರೂಪಾಯಿ ರೂ. 457 ಕೋಟಿ ನಿಗದಿಗೊಳಿಸಲಾಗಿದೆ.
ಸರ್ಕಾರಿ ಇಲಾಖೆಗಳ ಸಹಕಾರದೊಂದಿಗೆ ಮತ್ತು
ಸ್ಥಳೀಯ ಸಂಪನ್ಮೂಲದ ಸಾಮರ್ಥ್ಯಕ್ಕನುಗುಣವಾಗಿ 2020-21ರ ಜಿಲ್ಲಾ ಸಾಲ
ಯೋಜನೆಯು ಜಿಲ್ಲೆಯ ಮುಖ್ಯ ಆದ್ಯತಾವಲಯಗಳಿಗೆ
ನೆರವು ನೀಡುವುದರೊಂದಿಗೆ ಎಲ್ಲಾ ವರ್ಗಗಳ ಫಲಾನುಭವಿಗಳಿಗೆ
ಸೂಕ್ತ ರೀತಿಯ ಆರ್ಥಿಕ ನೆರವು
ಒದಗಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.