ಬೆಂಗಳೂರು: ದೇಶಕ್ಕಾಗಿ ಬೆವರು-ರಕ್ತ ಹರಿಸಿದ ನಾಯಕರ ಪಕ್ಷವಾದ ಕಾಂಗ್ರೆಸ್ ಪಕ್ಷ ಭಾರತದ ಏಕತೆ, ಅಖಂಡತೆ ಮತ್ತು ಸಾರ್ವಭೌಮತೆಗೆ ಸದಾ ಬದ್ಧವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಚೀನಾ – ಭಾರತ ಗಡಿಯಲ್ಲಿ ನಡೆದಿರುವ ಘಟನೆ ಕುರಿತು ಅಭಿಪ್ರಾಯ ತಿಳಿಸಿರುವ ಅವರು.ವೀರ ಸೈನಿಕರ ಬಲಿದಾನ ವ್ಯರ್ಥವಾಗಬಾರದು. ಹುತಾತ್ಮರ ಕುಟುಂಬಕ್ಕೆ ಗೌರವದ ಶ್ರದ್ಧಾಂಜಲಿ ಸಲ್ಲಿಸೋಣ. ಚೀನಾದ ದುಷ್ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸೋಣ ಎಂದಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದು.ಶತ್ರು ದೇಶದ ವಿರುದ್ಧ ಹೋರಾಡುವುದು ಸರ್ಕಾರ ಅಲ್ಲ,ದೇಶ. ಸರ್ಕಾರ ದೇಶಕ್ಕೆ, ದೇಶದ ಜನತೆಗೆ ಉತ್ತರದಾಯಿ.ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಂದ್ರ ಸರ್ಕಾರವನ್ನು ನಂಬಿದೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆಯೂ ಕೇಂದ್ರ ಸರ್ಕಾರದ್ದು.ಚೀನಾ ದೇಶ ಗಡಿತಂಟೆ ಶುರುಹಚ್ಚಿ ಏಳು ವಾರಗಳಾಗುತ್ತಾ ಬಂತು. ಅಲ್ಲಿನ ಬೆಳವಣಿಗೆಗಳ ನಿಜಸಂಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್‌ನಾಥ್ ಸಿಂಗ್ ಅವರು ಇಲ್ಲಿಯ ವರೆಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಆಳುವವರ ಮೌನ ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು ಎಂದು ಟೀಕಿಸಿದ್ದಾರೆ.