ದೊಡ್ಡಬಳ್ಳಾಪುರ: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೇಕಾರ ಕೂಲಿ ಕಾರ್ಮಿಕರಿಗೆ ನೀಡಲಾಗುವ ಪರಿಹಾರ ಧನ ಪಡೆಯಲು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ. ತಾಲೂಕಿನಲ್ಲಿ 25 ಕ್ಕೂ ಹೆಚ್ಚು ಸೈಬರ್ ಕೇಂದ್ರಗಳಲ್ಲಿ ದತ್ತಾಂಶ ನಮೂದು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇದರೊಂದಿಗೆ ಅಕೃತ ದಾಖಲೆಗಳಿರುವ ಸಂಘಟನೆಗಳು ಅರ್ಜಿ ಸಲ್ಲಿಸಿದರೆ, ಇಲಾಖೆಯಿಂದ ಅನುಮತಿ ನೀಡಲಾಗುವುದು ಎಂದು ಜಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಗಂಗಯ್ಯ ತಿಳಿಸಿದ್ದಾರೆ.
ನಗರದ ಅಪೆರಲ್ ಪಾರ್ಕ್‌ನ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ನಡೆದ ನೇಕಾರರ ಸಭೆಯಲ್ಲಿ ಅವರು ಮಾತನಾಡಿದರು.
ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರಿಗೆ ನೇರವಾಗಿ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಗೆ ತಲಾ 2ಸಾವಿರ ರೂರಂತೆ ಪಾವತಿಸಲು ಸರ್ಕಾರದ ಆದೇಶವಾಗಿದೆ.ಅರ್ಹ ನೇಕಾರರು ಸೇವಾಸಿಂಧುವಿನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
ಘಟಕದ ಮಾಲೀಕರಿಂದ ನಿಗದಿಪಡಿಸಿದ ನಮೂನೆಯಲ್ಲಿ ಮುಚ್ಚಳಿಕೆ ಪತ್ರದೊಂದಿಗೆ ಆಧಾರ್ ಕಾರ್ಡ್,ಡಿ.ಬಿ.ಟಿ ಗೆ ಬಳಕೆ ಮಾಡಲು ಕಾರ್ಮಿಕರ ಒಪ್ಪಿಗೆ ಪತ್ರ, ವಿದ್ಯುತ್ ಮಗ್ಗ ಘಟಕದ ಮುಂದೆ ಕಾರ್‍ಯನಿರ್ವಹಿಸುತ್ತಿರುವ ಫಲಾನುಭವಿಗಳ ಫೋಟೋ, ಘಟಕದ ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್.ಸಂಖ್ಯೆಯ ವಿದ್ಯುತ್ ಬಿಲ್, ಬಾಡಿಗೆ ಅಥವಾ ಲೀಸ್ ದಾಖಲಾತಿ,ಘಟಕದ ಉದ್ಯೋಗ್ ಆಧಾರ್ ಅಥವಾ ಪರವಾನಗಿ ಪತ್ರ, ಲಭ್ಯವಿದ್ದಲ್ಲಿ ನೇಕಾರರ ವಿವರಗಳನ್ನೊಳಗೊಂಡ ಮಜೂರಿ ಪಾವತಿಯ ಪ್ರತಿಗಳನ್ನು ಅರ್ಜಿಯೊಂದಿಗೆ ಜೂನ್ 30ರೊಳಗೆ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಹಾಜರಿದ್ದ ನೇಕಾರರ ಮುಖಂಡರು ಮಾತನಾಡಿ, ಸರ್ಕಾರ ನೀಡುವ 2 ಸಾವಿರ ಯಾವುದಕ್ಕೂ ಸಾಲದು. ಸರ್ಕಾರ ಅರ್ಜಿ ಸಲ್ಲಿಕೆ ನಿಯಮಗಳನ್ನು ಸಡಿಲಗೊಳಿಸಬೇಕು. ಆರ್.ಆರ್.ಸಂಖ್ಯೆಯ ವಿದ್ಯುತ್ ಬಿಲ್ ಒಬ್ಬರ ಹೆಸರಿನಲ್ಲಿದ್ದು, ಮಗ್ಗಗಳು ಇನ್ನೊಬ್ಬರ ಹೆಸರಿನಲ್ಲಿದ್ದರೆ ಅರ್ಜಿ ಸಲ್ಲಿಸಲು ಗೊಂದಲವಾಗುತ್ತದೆ. ಅರ್ಜಿ ಸಲ್ಲಿಸಲು ಸೈಬರ್ ಕೇಂದ್ರಗಳಲ್ಲಿ ಹೆಚ್ಚಿನ ಹಣ ಪಡೆಯುತ್ತಾರೆ, ಆದ್ದರಿಂದ ಇಲಾಖೆಯ ವತಿಯಿಂದಲೇ ವ್ಯವಸ್ಥೆ ಮಾಡಿ ಸರ್ಕಾರದ ನೆರವು ಎಲ್ಲಾ ನೇಕಾರರಿಗೂ ತಲುಪಬೇಕಿದೆ ಎಂದರು.
ಇದಕ್ಕೆ ಉತ್ತರಿಸಿದ ಉಪ ನಿರ್ದೇಶಕರು, ಸೈಬರ್ ಕೇಂದ್ರಗಳಲ್ಲಿ ಹಣ ಪಡೆಯದಂತೆ ಸೂಚಿಸಲಾಗುತ್ತಿದ್ದು, ಹೆಚ್ಚಿನ ಹಣಕ್ಕೆ ಒತ್ತಾಯ ಮಾಡಿದರೆ ಇಲಾಖೆಯ ಗಮನಕ್ಕೆ ತನ್ನಿ. ಈಗಾಗಲೇ ಸೇವಾಸಿಂಧುವಿನಲ್ಲಿ ತಂತ್ರಾಂಶಗಳು ಅಳವಡಿಸಿರುವುದರಿಂದ ಬದಲಾವಣೆ ಮಾಡಲಾಗದು. ನೇಕಾರರ ಸಮಸ್ಯೆಗಳನ್ನು ಜವಳಿ ಆಯುಕ್ತರು ಹಾಗೂ ಸಚಿವರ ಗಮನಕ್ಕೆ ತರಲಾಗುವುದು.ನೇಕಾರರು ಮಧ್ಯವರ್ತಿಗಳನ್ನು ನಂಬದೆ ನೇರವಾಗಿ ಜವಳಿ ಇಲಾಖೆ ಅಕಾರಿಗಳನ್ನು ಸಂಪರ್ಕ ಮಾಡಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ನೇಕಾರರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಜಿ.ಹೇಮಂತರಾಜು, ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್, ಟಿಎಂಸಿ ಬ್ಯಾಂಕ್ ಟಿಎಂಸಿ ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್,ಕನ್ನಡ ಪಕ್ಷದ ಅಧ್ಯಕ್ಷ ಎಂ.ಸಂಜೀವ್ ನಾಯಕ್ ಸೇರಿದಂತೆ ವಿವಿಧ ನೇಕಾರರ ಸಂಘದ ಸದಸ್ಯರು ಹಾಗೂ ನೇಕಾರರು ಹಾಜರಿದ್ದರು.