ದೊಡ್ಡಬಳ್ಳಾಪುರ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಇಂದು ರಾಜ್ಯ ಮಟ್ಟದ ಸಮಾರಂಭ ನಡೆಯಿತು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ “ಜನಸ್ನೇಹಿ ಆಡಳಿತದ ಒಂದು ವರ್ಷ, ಸಮಸ್ಯೆ-ಸವಾಲುಗಳ ವರ್ಷ, ಪರಿಹಾರದ ಸ್ಪರ್ಶ” ಕಾರ್ಯಕ್ರಮವು ಏಕಕಾಲಕ್ಕೆ ಬಿತ್ತರಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯು ಎಲ್ಲಾ ಜಿಲ್ಲಾಡಳಿತಗಳೊಡನೆ ಸಮನ್ವಯ ಸಾಧಿಸಿದ್ದರಿಂದ ಕಾರ್ಯಕ್ರಮ ನೇರ ಪ್ರಸಾರಗೊಂಡಿತು.
ಬೀರಸಂದ್ರ ಗ್ರಾಮದ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಮುಖ್ಯ ಸಭಾಂಗಣದಲ್ಲಿ (ಆಡಿಟೋರಿಯಂ) “ವರ್ಚುವಲ್ ಪ್ಲಾಟ್‍ಫಾರಂ” ಮೂಲಕ ಇಂದು ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತರಲಾದ “ಸವಾಲುಗಳ ಒಂದು ವರ್ಷ, ಪರಿಹಾರದ ಸ್ಪರ್ಶ” ಎಂಬ ಕಿರುಹೊತ್ತಿಗೆಯನ್ನು ಮತ್ತು “ಜನಪದ” ಹಾಗೂ “ಮಾರ್ಚ್ ಆಫ್ ಕರ್ನಾಟಕ” ಮಾಸಿಕ ಪತ್ರಿಕೆಯ ವಿಶೇಷ ಸಂಚಿಕೆಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಜಯಮ್ಮ, ಉಪಾಧ್ಯಕ್ಷರಾದ ಕನ್ಯಾಕುಮಾರಿ ಶ್ರೀನಿವಾಸ್, ದೇವನಹಳ್ಳಿ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಶಶಿಕಲಾ ಆನಂದ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಪುಷ್ಪ.ಜಿ.ರಾಯ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಎನ್.ಎಸ್.ಮಹೇಶ್, ವಾರ್ತಾ ಸಹಾಯಕರಾದ ಹೇಮಾವತಿ.ಜೆ, ಸೇರಿದಂತೆ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಕೊರೋನಾ ಸೋಂಕು ಗುಣಮುಕ್ತ ಫಲಾನುಭವಿಗಳು ಉಪಸ್ಥಿತರಿದ್ದರು.