ದೊಡ್ಡಬಳ್ಳಾಪುರ: ಲಾಕ್ ಡೌನ್ ಜಾರಿಯಿಂದ ನೇಕಾರಿಕೆ ಸ್ಥಗಿತವಾಗಿ ಸಂಕಷ್ಟಕ್ಕೆ ಸಿಲುಕಿದ್ದ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರಿಗೆ ರೂ2,000ಗಳ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿ ಎರಡು ತಿಂಗಳು ಕಳೆದಿದ್ದರು ಇಲ್ಲಿವರೆಗೆ ಜಿಲ್ಲೆಯಲ್ಲಿ 5,591 ಜನ ಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 130 ಜನ ಕೈ ಮಗ್ಗ ನೇಕಾರರು ಇದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 25 ಸಾವಿರ ಅರ್ಜಿಗಳು ಬಂದರು ಸರ್ಕಾರ ಪರಿಹಾರ ನೀಡಲಿದೆ ಎಂದು ಜಿಲ್ಲಾ ಜವಳಿ ಇಲಾಖೆ ಉಪನಿರ್ದೇಶಕ ಗಂಗಯ್ಯ ತಿಳಿಸಿದ್ದಾರೆ.
ಈ ಕುರಿತು ಪತ್ರಿನಾ ಹೇಳಿಕೆ ನೀಡಿರುವ ಅವರು, ಕಾರ್ಮಿಕರು ಕೆಲಸ ಮಾಡುತ್ತಿರುವ ವಿದ್ಯುತ್ ಮಗ್ಗದ ಮಾಲೀಕರು ದೃಢೀಕರಣ ಪತ್ರಕ್ಕೆ ಸಹಿ ಮಾಡಿಕೊಟ್ಟರೆ ಮಾತ್ರ ಕಾರ್ಮಿಕರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ. ಆದರೆ ಮಗ್ಗದ ಮಾಲೀಕರು ಕಾರ್ಮಿಕ ಇಲಾಖೆಯ ನಿಯಮಗಳು ನಮಗೆ ಅನ್ವಯ ಅಗಲಿವೆ ಎನ್ನುವ ಭಯದಿಂದ ನೇಕಾರ ಕಾರ್ಮಿಕರ ದೃಢೀಕರಣ ಅರ್ಜಿಗಳಿಗೆ ಸಹಿ ಹಾಕುತ್ತಿಲ್ಲ. ಹೀಗಾಗಿ ಕಾರ್ಮಿಕರು ಅರ್ಜಿ ಸಲ್ಲಿಕೆಗೆ ಅಡ್ಡಿಯಾಗಿದೆ.
ಮಗ್ಗದ ಮಾಲೀಕರು ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ದೃಢೀಕರಣ ಪತ್ರಕ್ಕೆ ಸಹಿ ಹಾಕಿಕೊಡದೇ ಇದ್ದರೆ ನೇಕಾರರು ಪಡೆಯುತ್ತಿರುವ ವಿದ್ಯುತ್ ರಿಯಾಯಿತಿ ಸೇರಿದಂತೆ ಸರ್ಕಾರದ ಯಾವುದೇ ರೀತಿಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.ಅಲ್ಲದೆ ಸರ್ಕಾರದ ನಿಯಮಗಳ ಪ್ರಕಾರ ಕ್ರಮವನ್ನು ಸಹ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.