ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡತೊಡಗಿದೆ.ಹಣವಂತರು ಹಾಗೂ ಕಾರ್ಪೋರೇಟ್‌ಗಳಿಗೆ ಅನುಕೂಲವಾಗಿ ರೈತರಿಗೆ ಅನ್ಯಾಯವಾಗುವ ಈ ಕಾಯ್ದೆಗಳು ಯಾವುದೇ ಕಾರಣಕ್ಕೂ ಜಾರಿಯಾಗದಂತೆ ತೀವ್ರ ಹೋರಾಟ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ನಡೆದ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮ ಹಾಗೂ ಇತ್ತೀಚೆಗೆ ನಿಧನರಾದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಸ್ವಾಮಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರ ತಮ್ಮ ಮಾರಾಟ ವ್ಯವಸ್ಥೆಯನ್ನು ಸುಗಮವಾಗಿ ರೂಪಿಸಿಕೊಂಡಿರುವ ಎಪಿಎಂಸಿ ವ್ಯವಸ್ಥೆಯು ಹೊಸ ಎಪಿಎಂಸಿ ಕಾಯ್ದೆಯಿಂದ ರೈತರ ಕೈತಪ್ಪಿ ಬಂಡವಾಳ ಶಾಹಿಗಳ ಹಿಡತಕ್ಕೆ ಹೋಗುತ್ತದೆ ಅಂತೆಯೇ ಭೂಸುಧಾರಣಾ ಕಾಯ್ದೆ ಸಹ ರೈತರಿಂದ ಉಳ್ಳವರ ಪಾಲಾಗುತ್ತದೆ. 1964ರ ಭೂಸುಧಾರಣಾ ಕಾಯ್ದೆಯಿಂದ ರೈತರಿಗೆ ಮಾತ್ರ ಸೀಮಿತವಾಗಿದ್ದು, ಭೂಮಿ ರೈತರ ಬಳಿಯೇ ಇರುತ್ತಿತ್ತು. ಆದರೆ ಈಗ ಕೃಷಿಕರಲ್ಲದವರು ತಮ್ಮ ಕಪ್ಪು ಹಣವನ್ನು ಸಕ್ರಮಗೊಳಿಸಲು ಕೃಷಿಯನ್ನು ಬಳಸಿಕೊಂಡು ಕೃಷಿಕರು ಬೀದಿಗೆ ಬರುವ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಕೈಗಾರಿಕೆಗಳಿಗೆ ರೈತರಿಂದ ಭೂ ಸ್ವಾಧೀನ ಮಾಡಿಕೊಳ್ಳುವುದಕ್ಕೆ ರೈತರ ಅಭ್ಯಂತರವಿಲ್ಲ. ಆದರೆ ಅದು ಸರಿಯಾದ ಉದ್ದೇಶಕ್ಕೆ ಬಳಕೆಯಾಗದೇ ರಿಯಲ್ ಎಸ್ಟೇಟ್‌ಗಳ ಕೈಗೆ ಹೋಗುತ್ತಿದೆ. ಹತ್ತಾರು ಎಕರೆ ಸ್ವಾಧೀನಕ್ಕೆ ನೂರಾರು ಎಕರೆ ಸ್ವಾಧಿನ ಪಡಿಸಿಕೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಕಂದಾಯ ಸಚಿವರು ಭೂ ಸ್ವಾಧೀನ ಬಳಕೆಯಾಗಿರುವ ಕುರಿತು ಶ್ವೇತ ಪತ್ರ ಹೊರಡಿಸಲಿ ಎಂದರು.
ಇತ್ತೀಚಿನ ವರ್ಷದಲ್ಲಿ ವಿದ್ಯುತ್ ಖಾಸಗೀಕರಣ, ರೈಲ್ವೆ ಎಲ್‌ಐಸಿ ಸೇರಿದಂತೆ ಸೇವಾ ವಲಯದ ಉದ್ಯಮಗಳನ್ನು ಖಾಸಗೀಕರಣ ಮಾಡಿ ಸರ್ಕಾರ ತನ್ನ ಹೊಣೆಯಿಂದ ನುಣಿಚಿಕೊಳ್ಳುತ್ತಿದೆ. ಇಡೀ ದೇಶದಲ್ಲಿ 15 ಕಂಪನಿಗಳು ವಾಣಿಜ್ಯೋದ್ಯಮನ್ನು ತೆಕ್ಕೆಗೆ ಪಡೆದುಕೊಂಡಿವೆ. ಖಾಸಗೀಕರಣದ ಹುನ್ನಾರ ಹಾಗೂ ರೈತ ವಿರೋಧಿ ನೀತಿಗಳನ್ನು ವಿರೋಧಿಸದಿದ್ದರೆ ಯಾರಿಗೂ ಉಳಿಗಾಲವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಪ್ರತಿರೋಧ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಕೆಂಚೇಗೌಡ, ವೆಂಕಟನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಬೈರೇಗೌಡ, ಜಿಲ್ಲಾಧ್ಯಕ್ಷ ಪ್ರಸನ್ನ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್, ತಾಲೂಕು ಅಧ್ಯಕ್ಷ ಹನುಮೇಗೌಡ, ಕಾರ್ಯದರ್ಶಿ ಶಿವರಾಜ್, ಮುಖಂಡರಾದ ಸುಲೋಚನಮ್ಮ, ಮುತ್ತೇಗೌಡ ಮತ್ತಿತರರು ಭಾಗವಹಿಸಿದ್ದರು.