ದೊಡ್ಡಬಳ್ಳಾಪುರ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಕೆಲಸ ಕಾರ್ಯಗಳಿಗೆ ನೇಮಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿಕ್ಷಕರನ್ನು ಬಿಡುಗಡೆಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಆದೇಶಿಸಿದ್ದಾರೆ.
ಆದೇಶ ಪತ್ರವನ್ನು ಬಿಬಿಎಂಪಿ ವಿಶೇಷ ಆಯುಕ್ತ ಅನ್ಬುಕುಮಾರ್ ಅವರಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಂ.ಎಸ್.ರಾಜಶೇಖರ್,ದೊಡ್ಡಬಳ್ಳಾಪುರ ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ವಿ.ಧನಂಜಯ, ರಾಜ್ಯಪರಿಷತ ಸದಸ್ಯ ಟಿ.ಕೆ.ಪ್ರಕಾಶ್,ದೇವನಹಳ್ಳಿ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಬಿ.ಆದರ್ಶ ಸ್ವೀಕರಿಸಿದರು.
ಆದೇಶದಲ್ಲಿರುವುದು
ಬಿಬಿಎಂಪಿ ಕಚೇರಿ ಆದೇಶದಂತೆ ಈಗಾಗಲೇ ಎರಡು ಹಂತದಲ್ಲಿ ಮತಗಟ್ಟೆ ಮಟ್ಟದ ತಂಡಗಳನ್ನು ಈಗಾಗಲೇ ರಚಿಸಿ ಆದೇಶ ಹೊರಡಿಸಲಾಗಿತ್ತು.ಅಲ್ಲದೆ ಉಪನಿರ್ದೇಶಕರು (ಆಡಳಿತ), ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಉಲ್ಲೇಖ-(2)ರ ಪತ್ರದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಾಸವಿಲ್ಲದ ಶಿಕ್ಷಕರ ಮಾಹಿತಿಯನ್ನು 4 ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿದ್ಧಪಡಿಸಿ ನೀಡಿರುತ್ತಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿಲ್ಲದ ಶಿಕ್ಷಕರಿಗೆ ವಿನಾಯಿತಿ ನೀಡಬೇಕೆಂದು ಕೋರಿರುವುದು ಸರಿಯಷ್ಟೆ.
ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿಲ್ಲದ 1696 ಮಂದಿ ಶಿಕ್ಷಕರುಗಳು ವಾಸಸ್ಥಳದಿಂದ ಆಗಮಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಅನಾನುಕೂಲವಾಗುವ ದೃಷ್ಟಿಯಿಂದ ಸದರಿಯವರು ವಾಸವಿರುವ ಪ್ರದೇಶದಲ್ಲಿ ಕೋವಿಡ್-19 ಕರ್ತವ್ಯ ನಿರ್ವಹಿಸಲು ಅನುವಾಗುವಂತೆ, ಬಿಬಿಎಂಪಿ ಕೋವಿಡ್-19 ಕೆಲಸಕಾರ್ಯಗಳಿಂದ ವಿನಾಯಿತಿ ನೀಡಲಾಗಿದೆ. (ಉಪ ನಿರ್ದೇಶಕರು (ಆಡಳಿತ),ಸಾರ್ವಜನಿಕ ಶಿಕ್ಷಣ ಇಲಾಖೆ,ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ದಿನಾಂಕ ಜುಲೈ.17 ರ ಪತ್ರದೊಂದಿಗೆ ಸಲ್ಲಿಸಿರುವ ಪಟ್ಟಿಯಲ್ಲಿರುವ ಶಿಕ್ಷಕರುಗಳಿಗೆ ಮಾತ್ರ)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೋವಿಡ್-19 ಕೆಲಸಕಾರ್ಯಗಳಿಂದ ವಿನಾಯತಿ ಪಡೆದಿರುವ ಶಿಕ್ಷಕರುಗಳ ಪಟ್ಟಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸಿ, ಸದರಿ ಶಿಕ್ಷಕರುಗಳ ವಾಸವಾಗಿರುವ ಸಂಬಂಧಪಟ್ಟ ಜಿಲ್ಲೆಗಳಲ್ಲಿ ಶಿಕ್ಷಕರುಗಳ ಸೇವೆಯನ್ನು ಕೋವಿಡ್-19 ಕೆಲಸಕಾರ್ಯಗಳಿಗೆ ನಿಯೋಜಿಸುವ ಬಗ್ಗೆ ಅಗತ್ಯಕ್ರಮ ಕೈಗೊಳ್ಳಬೇಕೆಂದು ಉಪ ನಿರ್ದೇಶಕರು (ಆಡಳಿತ),ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರಿಗೆ ಸೂಚಿಸಿದೆ.