ದೊಡ್ಡಬಳ್ಳಾಪುರ: ಪ್ರತಿಭಾವಂತರಿಗೆ ಸಮಾಜದಲ್ಲಿ ಎಂದಿಗೂ ಮನ್ನಣೆ ಇರುತ್ತದೆ. ಸಾಧನೆ ಮಾಡಲು ಎಲ್ಲರಿಗೂ ಅವಕಾಶವಿರುತ್ತದೆ.ಶ್ರದ್ದೆ, ಪರಿಶ್ರಮ ಮತ್ತು ನಿರಂತರ ಅಧ್ಯಯನದಿಂದ ವಿದ್ಯಾರ್ಥಿಗಳು ಉತ್ತಮ ಸಾಧಕರಾಗಲು ಸಾಧ್ಯವಾಗುತ್ತದೆ ಎಂದು ಶ್ರೀ ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಅಶ್ವತ್ಥಯ್ಯ ತಿಳಿಸಿದರು.
ಅವರು ನಗರದ ಕೊಂಗಾಡಿಯಪ್ಪ ಪ್ರೌಢಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದ ಎಲ್ಲಾ ವರ್ಗದ ಮಕ್ಕಳಿಗೂ ವಿದ್ಯಾಭ್ಯಾಸ ದೊರೆಯಬೇಕೆಂಬುದು ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಉದ್ದೇಶವಾಗಿದೆ. ಕೊಂಗಾಡಿಯಪ್ಪ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ನಮ್ಮ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಎಲ್ಲರಿಗೂ ವಿದ್ಯಾಭ್ಯಾಸ ನೀಡಬೇಕೆಂಬ ಕೊಂಗಾಡಿಯಪ್ಪ ಅವರ ಕನಸನ್ನು ನಮ್ಮ ವಿದ್ಯಾಸಂಸ್ಥೆಯೂ ನನಸು ಮಾಡುತ್ತಿದೆ ಎಂದರು.
ಲೋಕಸೇವಾನಿರತ ಡಿ. ಕೊಂಗಾಡಿಯಪ್ಪ ಸ್ಮಾರಕ ವಿದ್ಯಾಸಂಸ್ಥೆಯ ವತಿಯಿಂದ ಗುಣಮಟ್ಟದ ಶಿಕ್ಷಣವನ್ನು ನೀಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಉತ್ತಮ ಶಿಕ್ಷಣ ಶಿಕ್ಷಣದಿಂದ ಉತ್ತಮ ದೇಶವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳೇ ಶಿಕ್ಷಣದ ಪ್ರಮುಖ ಶಕ್ತಿಯಾಗಿದ್ದಾರೆ. ಸ್ಪರ್ಧಾ ಜಗತ್ತಿಗೆ ಅನುಗುಣವಾಗಿ ಶೈಕ್ಷಣಿಕ ಮಹತ್ವವನ್ನು ಅರಿತು ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಎ.ಆರ್.ರಾಜಶೇಖರ್, ಖಜಾಂಚಿ ಎ.ರಾಮಶೆಟ್ಟಿ, ನಿರ್ದೇಶಕರುಗಳಾದ ಸಿ.ಎಸ್.ಜಗದೀಶಬಾಬು, ಕೆ.ಎಂ.ಕೃಷ್ಣಮೂರ್ತಿ, ಜೆ.ಲಲಿತಮ್ಮ. ಕೆ.ಸುನಂದಮ್ಮ, ಎಸ್.ರಾಜಲಕ್ಷ್ಮಿ, ಜೆ.ಬಿ.ಮಹೇಶ್, ಎಸ್.ಪ್ರಕಾಶ್, ರುಕ್ಮಿಣಿ, ಕೊಂಗಾಡಿಯಪ್ಪ ಪ್ರೌಢಶಾಲೆಯ ಮುಖ್ಯಶಿಕ್ಷಕ ಎ.ಜಯರಾಮ್. ಸಹ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.
ಪ್ರತಿಭಾವಂತರಿಗೆ ಅಭಿನಂದನೆ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲಾಮಟ್ಟದಲ್ಲಿ ಉತ್ತಮ ಅಂಕಗಳನ್ನು ಪಡೆದ ಸಿ.ನರೇಂದ್ರಬಾಬು, ಪಿ.ಹರ್ಷವರ್ಧನ್, ವರಪ್ರಸಾದ್, ಎಂ.ನಂದಿನಿ ಮತ್ತು ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದ ಕೆ.ಚಂದನಾ, ಕೆ.ನವ್ಯ, ವಿ.ಮೇಘನಾ, ಡಿ.ಎಸ್.ನಂದಿನಿ, ಸಂಸ್ಕೃತ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದ ಕೆ.ಧನ್ಯ, ಹಿಂದಿ ಭಾಷೆಯಲ್ಲಿ 100 ಅಂಕಗಳಿಗೆ 100 ಅಂಕಗಳನ್ನು ಪಡೆದ ತ್ರಿವೇಣಿ, ತನಿಷ್ಕ, ಯು.ಪ್ರಿಯದರ್ಶಿನಿ, ಸುಭಾಷ್, ಕೀರ್ತನಾ, ವಿಜಯಕುಮಾರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಶಾಲಾ ಹಂತದಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾದ 22 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.