ದೊಡ್ಡಬಳ್ಳಾಪುರ: ಕರೊನಾ ಸೋಂಕಿನ ಕಾರಣ ಸ್ಥಗಿತಗೊಳಿಸಲಾಗಿದ್ದ ಸರ್ಕಾರಿ ಸಾರಿಗೆ ಸಂಚಾರವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದೆಂದು ಡಿಪೋ ವ್ಯವಸ್ಥಾಪಕ ಆನಂದ್ ತಿಳಿಸಿದ್ದಾರೆ.
ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು, ತಾಲೂಕಿನ 93 ರೂಟ್ ಗಳಲ್ಲಿ ಪ್ರಸ್ತುತ ಬೆಂಗಳೂರು, ತುಮಕೂರು, ವಿಜಯಪುರ, ದೇವನಹಳ್ಳಿ, ನೆಲಮಂಗಲ, ಅನಂತಪುರ, ಹಿಂದೂಪುರ ಮತ್ತಿತರ 40ರೂಟ್ ಗಳನ್ನು ಮಾತ್ರ ಆರಂಭಿಸಲಾಗಿದೆ. ಸರ್ಕಾರದ ಆದೇಶದ ನಂತರ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಪ್ರಾಯೋಗಿಕವಾಗಿ ವಾಹನಗಳನ್ನು ಕಳಿಸಿತ್ತಾದರೂ ಪ್ರಯಾಣಿಕರ ಕೊರತೆಯ ಕಾರಣ ಮತ್ತೆ ವಾಹನ ಸಂಚಾರ ನಿಲ್ಲಿಸಲಾಯಿತು. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು,ಶೀಘ್ರದಲ್ಲಿಯೇ ಹೋಬಳಿ ಕೇಂದ್ರಗಳ ವ್ಯಾಪ್ತಿಯ ತೂಬಗೆರೆ,ಅಲಿಪುರ,ಕೊಟ್ಟಿಗೆಮಾಚೇನಹಳ್ಳಿ,ಆರೂಢಿ ಮತ್ತಿತರ ವ್ಯಾಪ್ತಿಗೆ ಸಾರಿಗೆ ಸಂಚಾರ ಆರಂಭಿಸಲು ಸಿದ್ದತೆ ನಡೆಸಲಾಗಿದೆ ಎಂದಿದ್ದಾರೆ.
ಶಾಲಾ ಕಾಲೇಜು ಆರಂಭಕ್ಕೆ ಕಾಯುತ್ತಿರುವ ಸಾರಿಗೆ ಇಲಾಖೆ…?
ಸಮಾನ್ಯವಾಗಿ ಸಾರಿಗೆ ಬಸ್ಸುಗಳಿಗೆ ಹೆಚ್ಚಿನ ಪ್ರಯಾಣಿಕರು ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು. ಆದರೆ, ಕರೊನಾ ಸೋಂಕನ್ನು ತಡೆಗಟ್ಟಲು ಸರಕಾರ ಶಾಲೆ ಕಾಲೇಜುಗಳ ಆರಂಭಿಸಲು ಇದುವರೆಗೂ ಅನುಮತಿ ನೀಡದ ಕಾರಣ ಸಾರಿಗೆ ಬಸ್ಸುಗಳಿಗೆ ಪ್ರಯಾಣಿಕರ ಕೊರತೆ ಉಂಟಾಗುತ್ತಿದೆ.ಅಲ್ಲದೆ,ಉದ್ಯೋಗಿಗಳು ಕರೊನಾ ಭಯದಿಂದ ಸ್ವಂತ ವಾಹನ ಬಳಸುತ್ತಿರುವುದು ಸಹ ಸಾರಿಗೆ ಸಂಚಾರದ ಮೇಲೆ ಪರಿಣಾಮ ಬೀರಿದೆ.
ಪ್ರಸ್ತುತ ಶಾಲಾ ಕಾಲೇಜುಗಳ ಆರಂಭಕ್ಕೆ ಸಿದ್ದತೆ ನಡೆಸುತ್ತಿದ್ದು,ಇದರ ಬೆನ್ನಲ್ಲೆ ಸಾರಿಗೆ ಸಂಚಾರ ಆರಂಭವಾಗಬಹುದು ಎನ್ನಲಾಗುತ್ತಿದ್ದು,ನಂತರವೇ ಗ್ರಾಮೀಣ ಭಾಗಗಳಿಗೆ ಬಸ್ಸುಗಳ ಸಂಚಾರ ಕಾಣಬಹುದಾಗಿದೆ.