ದೊಡ್ಡಬಳ್ಳಾಪುರ: ಹೆಸರಿಗೆ ಮಾತ್ರ ನಾಲ್ಕು ಪಥದ ರಸ್ತೆ. ಆದರೆ ವಾಹನಗಳ ಓಡಾಟಕ್ಕೆ ಲಭ್ಯ ಇರುವುದು ಮಾತ್ರ ಎರಡು ಪಥದ ರಸ್ತೆಗಿಂತಲು ಕಡಿಮೆ. ರಸ್ತೆ ವಿಸ್ತರಣೆಯಾಗಿರುವುದು ವಾಹನಗಳ ಓಡಾಟಕ್ಕಿಂತಲು ವಾಹನಗಳ ನಿಲುಗಡೆಗೆ ಹೆಚ್ಚು ಬಳಕೆಯಾಗುತ್ತಿದೆ.
ದೊಡ್ಡಬಳ್ಳಾಪುರದ ಮೂಲಕ ಹಾದು ಹೋಗಿರುವ ಹಿಂದೂಪುರ-ಬೆಂಗಳೂರು ರಾಜ್ಯ ಹೆದ್ದಾರಿಯನ್ನು ನಾಲ್ಕು ಪಥಗಳ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಹಾಗೆಯೇ ಇದು ಟೋಲ್ ಪಾವತಿ ರಸ್ತೆಯು ಸಹ ಆಗಿದೆ. ಆದರೆ ಟೋಲ್ನವರು ಶುಲ್ಕ ವಸೂಲಿ ಮಾಡಿಕೊಂಡು ತಮ್ಮ ಪಾಡಿಗೆ ತಾವಿದ್ದಾರೆ ವಿನಹ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಏನಾದರು ಅಡೆತಡೆ ಇದೆಯ ಎನ್ನುವ ಬಗ್ಗೆ ಮಾತ್ರ ಒಂದಿಷ್ಟು ತಲೆಕೆಡಿಸಿಕೊಳ್ಳುತ್ತಲೇ ಇಲ್ಲ.
ಹೆದ್ದಾರಿಯಲ್ಲಿನ ಬಾಶೆಟ್ಟಿಹಳ್ಳಿ ಯಿಂದ ಆರಂಭವಾಗಿ ದೊಡ್ಡಬಳ್ಳಾಪುರ ನಗರ ವ್ಯಾಪ್ತಿ ಮುಕ್ತಾಯವಾಗುವ ಪಾಲನಜೋಗಳ್ಳಿವರೆಗೂ ರಸ್ತೆಯ ಎರಡೂ ಬದಿಯಲ್ಲೂ ರಾತ್ರಿ ವೇಳೆ ಸರಕು ಸಾಗಾಣಿಕೆ ಲಾರಿಗಳು, ಹಗಲಿನ ವೇಳೆಯಲ್ಲಿ ಕಾರು, ಬೈಕ್ಗಳನ್ನು ನಿಲುಗಡೆ ಮಾಡಲಾಗುತ್ತದೆ. ಅದರಲ್ಲೂ ನಗರಸಭೆ ವ್ಯಾಪ್ತಿಯ ರೈಲ್ವೆ ನಿಲ್ದಾಣ ವೃತ್ತ, ಡಿ.ಕ್ರಾಸ್, ಪ್ರವಾಸಿ ಮಂದಿರ ವೃತ್ತ, ಎಪಿಎಂಸಿ ಮಾರುಕಟ್ಟೆ ಸಮೀಪದ ರಸ್ತೆಯ ಎರಡೂ ಬದಿಯಲ್ಲೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಹೀಗಾಗಿ ಈ ಪ್ರದೇಶಗಳಲ್ಲಿ ನಾಲ್ಕು ಪಥದ ರಸ್ತೆ ಇರಲಿ ಎರಡೂ ಪಥಕ್ಕೂ ಕಡಿಮೆಯಾಗಿದೆ ಎನ್ನುವುದು ಸಾರ್ವಜನಿಕರ ದೂರು.
ವಾನಗಳವರು ರಸ್ತೆ ಬಳಕೆಗೆ ಟೋಲ್ ನೀಡಿಯು ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಲಾಕ್ಡೌನ್ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೂ ಟ್ರಾಫಿಕ್ ನಿಯಂತ್ರಣ ಇರಲಿ, ಕನಿಷ್ಟ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಿರುವ ವಾಹನಗಳ ತೆರವಿನ ಕಡೆಗೂ ಸಹ ಪೊಲೀಸರು ನಿಗಾವಹಿಸುವುದನ್ನೇ ಬಿಟ್ಟಿದ್ದಾರೆ ಎಂದು ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್ ದೂರಿದ್ದಾರೆ.
ನನಗರದ ಬಸವ ಭವನದಿಂದ ತಾಲ್ಲೂಕು ಕಚೇರಿ ಮೂಲಕ ನೆಲಮಂಗಲ ರಸ್ತೆಯ ಕನಕದಾಸ ವೃತ್ತದವರೆಗೂ ರಸ್ತೆಯನ್ನು ವಿಸ್ತರಣೆ ಮಾಡಿ ರಸ್ತೆ ಮಧ್ಯದಲ್ಲಿ ವಿಭಜಕವನ್ನು ಹಾಕಲಾಗಿದೆ. ಆದರೆ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗವು ಸೇರಿದಂತೆ ತಾಲ್ಲೂಕು ಕಚೇರಿ ವೃತ್ತ, ಇಸ್ಲಾಂಪುರದಲ್ಲಿನ ರಸ್ತೆಯ ಎರಡೂ ಬದಿಯಲ್ಲೂ ಬೈಕ್, ಕಾರು, ಸರಕು ಸಾಗಾಣಿಕೆ ವಾಹನಹಗಳನ್ನು ಇಡೀ ದಿನ ನಿಲ್ಲಿಸಿಯೇ ಇರುತ್ತಾರೆ. ಹೀಗಾಗಿ ರಸ್ತೆ ವಿಸ್ತರಣೆ ಮಾಡಿ ಡಾಂಬರು ಹಾಕಿರುವುದು ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳ ಕಲ್ಪಿಸಿದಂತಾಗಿದೆಯೆ ವಿನಹ ಸಂಚಾರಕ್ಕೆ ಮಾತ್ರ ಬಳಕೆಯಾಗುತ್ತಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ಲಕ್ಷ್ಮೀನಾರಾಯಣ್ ತಿಳಿಸಿದ್ದಾರೆ.