ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ.19 ಮತ್ತು 20ರಂದು ನಗರದ ಬಸವ ಭವನದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ.
ಕಳೆದ ವರ್ಷ ಮಾರ್ಚ್ 16 ಮತ್ತು 17ರಂದು ನಡೆಯಬೇಕಿದ್ದ ಸಮ್ಮೇಳನ ಕೊವಿಡ್ ಕಾರಣದಿಂದಾಗಿ ಮುಂದೂಡಲಾಗಿತ್ತು. ಈ ನಡುವೆ ಜಿಲ್ಲೆಯ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯದೇ 23ನೇ ಸಮ್ಮೇಳನವನ್ನು ಜ.3 ಮತ್ತು 4ರಂದು ವಿಜಯಪುರದಲ್ಲಿ ನಡೆಸಿದ ಜಿಲ್ಲಾಧ್ಯಕ್ಷರ ಮೇಲೆ ತಾಲೂಕಿನ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ತದ ನಂತರ 22 ನೇ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಇದ್ದ ಗೊಂದಲಗಳು ಬಗೆಹರಿದಿದೆ.
ಸಮ್ಮೇಳನದ ಕುರಿತು ಮಾಹಿತಿ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಫೆ. 19 ಮತ್ತು 20ರಂದು ನಗರದ ಬಸವ ಭವನದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಅನ್ಯ ಕಾರ್ಯ ನಿಮಿತ್ತ ರಜಾ ಸೌಲಭ್ಯವಿದೆ.ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರಿಗೆ ಆಹ್ವಾನ ನೀಡಲಾಗಿದ್ದು, ಎಲ್ಲಾ ಕನ್ನಡಪರ ಮನಸ್ಸುಗಳು ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಸಮ್ಮೇಳನದ ಕಾರ್ಯಕ್ರಮಗಳು: ಫೆ.19ರಂದು ಬೆಳಗ್ಗೆ 8 ಕ್ಕೆ ಬಸವಭವನದಲ್ಲಿ ಧ್ವಜಾರೋಹಣ ನಡೆಯಲಿದೆ. 8.30 ಕ್ಕೆ ನಗರದ ಜಯಚಾಮರಾಜೇಂದ್ರ ವೃತ್ತದ ಬಳಿಯ ಡಾ.ರಾಜ್‍ಕುಮಾರ್ ಪ್ರತಿಮೆ ಮುಂಭಾಗದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 11ಗಂಟೆಗೆ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಕಂದಾಯ ಸಚಿವ ಆರ್.ಅಶೋಕ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿ ಡಾ.ಸಿದ್ದಲಿಂಗಯ್ಯ, ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ, ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್, ಸಂಸದ ಬಿ.ಎನ್.ಬಚ್ಚೇಗೌಡ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಚಿತ್ರನಟಿ ಭವ್ಯ, ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಮೊದಲಾದವರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಚಿಂತಕ ಪ್ರೋ. ಎಂ.ಜಿ.ಚಂದ್ರಶೇಖರಯ್ಯ ಅಧ್ಯಕ್ಷತೆಯಲ್ಲಿ ನಾಡು ನುಡಿ ಸಂಸ್ಖೃತಿ ಕುರಿತ ವಿಚಾರ ಗೋಷ್ಟಿ ನಡೆಯಲಿದೆ. ಪತ್ರಕರ್ತ ರಮಾಕಾಂತ್ ಕನ್ನಡ ಚಳವಳಿ ಮತ್ತು ಮಾಧ್ಯಮ ಕುರಿತು, ಪತ್ರಕರ್ತ ಎಂ.ಜೆ.ರಾಜಶೇಖರ ಶೆಟ್ಟಿ ದೊಡ್ಡಬಳ್ಳಾಪುರದಲ್ಲಿ ಕನ್ನಡ ಚಳವಳಿಯ ಇತಿಹಾಸ ಕುರಿತು, ಉಪನ್ಯಾಸಕ ಹುಲಿಕುಂಟೆ ಮೂರ್ತಿ ಒಂದು ಭಾಷೆಯಾಗಿ ಕನ್ನಡದ ಅನನ್ಯತೆ ಕುರಿತು, ಪ್ರಾಧ್ಯಾಪಕ ಡಾ.ಜಿ.ಗಂಗರಾಜು ಕನ್ನಡ ಸಾಹಿತ್ಯ ಮತ್ತು ಮಹಿಳೆ ಕುರಿತು ಮಾತನಾಡಲಿದ್ದಾರೆ.
ಸಂಜೆ 4 ಗಂಟೆಗೆ ಚಿಂತಕ ಮಾಜಿ ಸಚಿವೆ ರಾಣಿ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ, ಮಹಿಳೆ ಮತ್ತು ಮಕ್ಕಳು ಕುರಿತ ವಿಚಾರ ಗೋಷ್ಠಿ ನಡೆಯಲಿದೆ.
ಸಾಹಿತಿ ಡಾ.ವಿ.ಎನ್.ರಮೇಶ್ ಕನ್ನಡ ಮಾಧ್ಯಮ ಶಾಲೆ ಉಳಿವಿನಲ್ಲಿ ಮಹಿಳೆ ಪಾತ್ರ ಕುರಿತು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಿಲನ ಕೆ.ಭರತ್ ಜಾನಪದ ಸಂಸ್ಕೃತಿ ಮತ್ತು ಮಹಿಳೆ ಕುರಿತು, ನಟಿ ಸೌಮ್ಯ ಸಮಾಜ ಮತ್ತು ಲಿಂಗ ತಾರತಮ್ಯ ಕುರಿತು, ಹುಸ್ಕೂರು ಮಂಜುಳ ರೈತ ಮಹಿಳೆ ಮತ್ತು ಸವಾಲುಗಳು ಕುರಿತು ಮಾತನಾಡಲಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…