ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಘೋಷಣೆ ವಿವಾದದ ಬೆನ್ನಲ್ಲೇ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಿಗೆ ಸಮಾನ ನ್ಯಾಯ ಹಾಗೂ ಆರ್ಥಿಕ ಅಭಿವೃದ್ಧಿಯ ಕಾರಣ ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ಗ್ರಾಮಾಂತರ ಜಿಲ್ಲೆಯನ್ನು “ನವ ಬೆಂಗಳೂರು” ಎಂದು ಘೋಷಣೆ ಮಾಡಿ ಅಭಿವೃದ್ಧಿಪಡಿಸಬೇಕೆಂಬ ಹೋರಾಟ ಚುರುಕು ಪಡೆದಿದ್ದು, ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ನಿಮಿತ್ತ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅವರಿಗೆ ನವ ಬೆಂಗಳೂರು ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ “ನವ ಬೆಂಗಳೂರು ಹೋರಾಟ ಸಮಿತಿಯ ಮುಖಂಡ ಜಿ.ಎನ್.ಪ್ರದೀಪ್, ಕಿರಿದಾದ ಭೌಗೋಳಿಕ ಪ್ರದೇಶ ಹಾಗೂ ಮಿತಿಮೀರಿದ ಜನಸಂಖ್ಯೆಯ ಕಾರಣ ಪ್ರಸ್ತುತ ಬೆಂಗಳೂರು ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯ ಹಾಗೂ ಹೂಡಿಕೆದಾರರ ನಿರಾಸಕ್ತಿ ಹೆಚ್ಚಾಗಿದ್ದು, ಬೆಂಗಳೂರು ನಗರದ ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ಇನ್ನೊಂದು ಪರ್ಯಾಯ ನಗರದ ಅನಿವಾರ್ಯತೆ ರಾಜ್ಯಕ್ಕಿದ್ದು, ನಗರಕ್ಕೆ ಹೊಂದಿಕೊಂಡಂತಿರುವ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪರ್ಯಾಯ ನಗರವಾಗಲು ಬೇಕಾದ ಎಲ್ಲಾ ಅರ್ಯತೆಗಳನ್ನೂ ಹೊಂದಿದ್ದು, ಮುಂಬರುವ ರಾಜ್ಯ ಬಜೆಟ್‌ನಲ್ಲಿ ನಮ್ಮ ಜಿಲ್ಲೆಯನ್ನು “ನವ ಬೆಂಗಳೂರು” ಎಂದು ಘೋಷಿಸಿ ವಿಶೇಷ ಅನುದಾನದಡಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಮಾನ್ಯ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು.
ನಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆಂದು ಹೇಳಿದ್ದಾರೆ. ಸಚಿವರ ಹಾಗೂ ಮುಖ್ಯಮಂತ್ರಿಗಳ ಮೇಲೆ ನಮಗೆ ಭರವಸೆ ಇದೆ. ಹಾಗೇನಾದರೂ ಮುಂದಿನ ದಿನಗಳಲ್ಲಿ ಸರ್ಕಾರವು ಈ ಬಗ್ಗೆ ನಿರ್ಲಕ್ಷ್ಯ ಮಾಡಿದರೆ, ನಮ್ಮ ನಾಯಕರಾದ ಕೆ.ವಿ.ಸತ್ಯ ಪ್ರಕಾಶ್ ರವರ ನೇತೃತ್ವದಲ್ಲಿ ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದರು.
ನಂತರ ಮಾತನಾಡಿದ ಮುಖಂಡ ಕೆ.ವಿ.ಸತ್ಯಪ್ರಕಾಶ್, ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ರಾಜ್ಯದ ಆರ್ಥಿಕ ಭವಿಷ್ಯದ ದೃಷ್ಟಿಯಿಂದ “ನವ ಬೆಂಗಳೂರು” ಘೋಷಣೆ ಅನಿವಾರ್ಯವಾಗಿದ್ದು, ಈಗಾಗಲೇ ಜಿಲ್ಲೆಯ ನಾಲ್ಕೂ ಶಾಸಕರ ಬಳಿ ವಿಚಾರ ಪ್ರಸ್ತಾಪಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದೇವೆ. ಇಡೀ ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರು, ಹೋರಾಟಗಾರರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಒಗ್ಗಟ್ಟಾಗಿ ಹೋರಾಟ ನಡೆಸಿ “ನವ ಬೆಂಗಳೂರು” ಪರಿಕಲ್ಪನೆಯನ್ನು ಸಾಕಾರ ಮಾಡಿಕೊಳ್ಳುತ್ತೇವೆ” ಎಂದರು.
ಸಚಿವರ ಜೊತೆಯಿದ್ದ ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಜಿಲ್ಲೆಯ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ “ನವ ಬೆಂಗಳೂರು” ಪರಿಕಲ್ಪನೆಯ ಅನುಷ್ಠಾನ ಅವಶ್ಯವಿದೆ ಎನ್ನುವ ಮೂಲಕ “ನವ ಬೆಂಗಳೂರು ಹೋರಾಟ ಸಮಿತಿ” ಗೆ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಮುಖಂಡರಾದ ಸಿ.ಕೆ.ದಯಾನಂದ್, ಕೆ.ನಾಗೇಶ್,ಆನಂದ್ ದೊಡ್ಡತುಮಕೂರು, ಎಂ.ಹರ್ಷ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….