ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಆಕ್ಸಿಜನ್‌ನ ಬೇಡಿಕೆ ಹೆಚ್ಚುತ್ತಿದ್ದು, ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೆ ತಲಾ 40 ರಂತೆ ಒಟ್ಟು 160 ಅಮೇರಿಕ ಮಾದರಿಯ ಆಕ್ಸಿಜನ್ ಕಾನ್ಸನ್ಟ್ರೇಟರ್‌ಗಳನ್ನು ವಿತರಿಸಲಾಗಿದ್ದು, ಯಾರಿಗೂ ಸಹ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ಮಿನಿ ವಿಧಾನಸೌಧದ ಆವರಣದಲ್ಲಿ ಇಂದು ನಡೆದ ಆಕ್ಸಿಜನ್ ಕಾನ್ಸನ್ಟ್ರೇಟರ್ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿದರು.
ಸುಮಾರು 160 ಅಮೇರಿಕಾ ಮಾದರಿಯ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಜಿಲ್ಲೆಗೆ ತರಿಸಲು ಜಿಲ್ಲಾಧಿಕಾರಿಗಳು ನಿರಂತರವಾಗಿ ಫಾಲೋಅಪ್ ಮಾಡಿದ್ದಾರೆ ಎಂದರು ಅಲ್ಲದೆ ಆಕ್ಸಿಜನ್ ಕಾನ್ಸನ್ಟ್ರೇಟರ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಅಳವಡಿಸಲಾಗುವುದು. ಸೋಂಕು ದೃಢಪಟ್ಟ ರೋಗಿಗಳು ಮೊದಲು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದು ಇದರ ಸದುಪಯೋಗ ಪಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, 2021ರ ಮೇ 10 ರಂದು ನೆಲಮಂಗಲ, ಹೊಸಕೋಟೆಗೆ ಭೇಟಿ ನೀಡಿದ ವೇಳೆ, ಆಕ್ಸಿಜನ್ ಕೊರೆತೆಯಿಂದ ಬಹಳಷ್ಟು ರೋಗಿಗಳು ಆಸ್ಪತ್ರೆಗಳ ಮುಂದೆ ನಿಂತಿರುವುದು ಕಂಡುಬಂದಿದ್ದು, ಇದನ್ನು ತಪ್ಪಿಸಲು ಆಕ್ಸಿಜನ್ ಅವಶ್ಯಕತೆ ಇರುವವರಿಗಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್‌ಗಳನ್ನು ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲಿ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಅಳವಡಿಸುವ ಮೂಲಕ, ಆಕ್ಸಿಜನ್ ಕೊರತೆಯು ನೀಗಿಸಲಾಗುವುದು ಎಂದರು.
ಔಷಧಿಗಳ ಕೊರೆತೆಯಿಂದ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಸೋಂಕಿತರಿಗೆ ಎರಡು ಅಥವಾ ಮೂರು ರೀತಿಯ ಔಷಧಿಗಳನ್ನು ಕೊಡಲಾಗುತ್ತಿದೆ ಎಂಬ ದೂರುಗಳು ಬಂದಿರುವ ಹಿನ್ನೆಲೆ, ಜಿಲ್ಲೆಯ ವೈದ್ಯರುಗಳಿಂದ ಪಡೆದ ಒಂದು ವರದಿ ತೆಗೆದುಕೊಂಡು ಹೊಸ ಔಷಧಿ ಕಿಟ್ ನೀಡಲಾಗುತ್ತಿದೆ ಹಾಗೂ ಇದರಲ್ಲಿ ಏಳು ರೀತಿಯ ಔಷಧಿಗಳಿದ್ದು, ಇದರ ಬೆಲೆ 700 ರಿಂದ 800 ರೂಪಾಯಿಗಳಾಗಿದೆ. ಈ ಔಷಧಿಗಳ ಕಿಟ್‌ಅನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಇಂದಿನಿಂದಲೇ ಪ್ರಾರಂಭವಾಗಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ದಿಕ್ಕಿನಲ್ಲಿ ವಿಶಿಷ್ಟ ಹೆಜ್ಜೆಯನ್ನು ಇಡುವ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಯಾವುದೇ ರೀತಿಯ ಲಾಠಿ ಪ್ರಹಾರ ಮಾಡದೆ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.
ಅನಾವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಲು, ಕೆಲವರಿಗೆ ಅವಕಾಶ ನೀಡಿದರೆ ದುರುಪಯೋಗ ಪಡಿಸಿಕೊಳ್ಳಬಾರದೆಂಬ ಕಾರಣಕ್ಕೆ ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಚೆಕ್‌ಪೋಸ್ಟ್ ಗಳನ್ನು ಸಹ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.
ಅಂತರ್ ಜಿಲ್ಲೆಯ ಓಡಾಟವನ್ನು ನಿಯಂತ್ರಣ ಮಾಡಲು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕೋವಿಡ್ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅನಗತ್ಯ ಓಡಾಟವನ್ನು ಸಾರ್ವಜನಿಕರು ನಿಲ್ಲಿಸಬೇಕು ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ, ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುಳಾದೇವಿ, ದೊಡ್ಡಬಳ್ಳಾಪುರ ಡಿವೈಎಸ್ಪಿ ಟಿ.ರಂಗಪ್ಪ, ನಾಲ್ಕು ತಾಲ್ಲೂಕುಗಳ ತಹಶಿಲ್ದಾರ್‌ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….