ದೊಡ್ಡಬಳ್ಳಾಪುರ: ಸಾವಯವ ಕೃಷಿಯಿಂದ ಭೂ ಫಲವತ್ತತೆ ಹೆಚ್ಚಾಗಿ ಉತ್ತಮ ಇಳುವರಿ ಪಡೆಯಲು ಹಾಗೂ ಮುಂದಿನ ಪೀಳಿಗೆಗೆ ಭೂಮಿಯನ್ನು ಉಳಿಸಲು ಸಾಧ್ಯ ಎಂದು ಸ್ವದೇಶಿ ಜಾಗರಣಾ ಮಂಚ್ ಕ್ಷೇತ್ರ ಸಂಘಟಕರಾದ ಜಗದೀಶ್ ಜಿ ಹೇಳಿದರು.
ಸ್ವದೇಶಿ ಜಾಗರಣಾ ಮಂಚ್ ವತಿಯಿಂದ ತಾಲೂಕಿನ ಹೊಸಹಳ್ಳಿಯಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಪರಿವಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎರೆಹುಳು ಸಾಕಾಣಿಕೆ ಘಟಕ, ಕಾಂಪೋಸ್ಟ್ ಘಟಕ, ಅಜೋಲ ತಯಾರಿಕೆ, ಗಂಜಲ ಸಂಗ್ರಹಣಾ ಡ್ರಂ, ಗಂಜಲ ಸಂಗ್ರಹಣಾ ಕೊಟ್ಟಿಗೆ, ಜೀವಾಮೃತ ತಯಾರಿಕೆ ಘಟಕ ನಿರ್ಮಾಣ, ಬಯೋಡೈಜಸ್ಟರ್ ಹಾಗೂ ಹಸಿರಲೆ ಗೊಬ್ಬರ ಬೀಜಗಳು ಹೀಗೆ ಹಲವಾರು ಕಾರ್ಯಕ್ರಮ ಪಡೆದುಕೊಂಡು ಸಾವಯವ ಕೃಷಿ ಮಾಡಿರುವ ಬಗ್ಗೆ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮಗಳನ್ನು ಆರ್ಥಿಕವಾಗಿ ಸದೃಢವನ್ನಾಗಿಸಲು ಹಾಗೂ ಸ್ವಾವಲಂಬಿಯಾಗ ಗುಡಿ ಕೈಗಾರಿಕೆ, ಪಂಡಿತ ಪರಂಪರೆ, ಗೋ ಉತ್ಪನ್ನಗಳ ಬಳಕೆ ಮತ್ತು ಅದರ ಮಹತ್ವವನ್ನು ಜಗದೀಶ್ ಜೀ ವಿವರಿಸಿದರು.
ಕಾರ್ಯಕ್ರಮದ ಆಯೋಜಕ ತಾಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್ ಮಾತನಾಡಿ, ಸಾವಯವ ಕೃಷಿ ಪದ್ದತಿ ಬದುಕಿನ ಭಾಗವಾಗಬೇಕು. ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು, ಬೀಜೋಪಚಾರದಿಂದ ಹಿಡಿದು ಬೆಳೆ ತೆಗೆಯುವವರೆಗೂ ಭೂಮಿಗೆ ರಸಾಯನಿಕದ ಮೂಲಕ ವಿಷ ಉಣಿಸುತ್ತಿದ್ದೇವೆ. ರಸಾಯನಿಕದಿಂದ ಬರಿ ಕ್ರಿಮಿ ಕೀಟ ಸಾಯುತ್ತಿಲ್ಲ. ಮಣ್ಣಿನಲ್ಲಿರುವ ಸೂಕ್ಷ್ಮಾಣುಗಳು ಸಾಯುತ್ತಿವೆ. ಇದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಬೆಲೆ ಕುಂಠಿತ, ಪೌಷ್ಠಿಕವಲ್ಲದ ಆಹಾರ ಉತ್ಪಾದನೆ ಮಾಡುತ್ತಿದ್ದೇವೆ. ಹಿಂದಿನಂತೆ ಸಾವಯವ ಕೃಷಿ ನಮ್ಮ ಬದುಕಿನ ಭಾಗವಾಗಬೇಕು ಎಂದರು.
ಈ ಸಂದರ್ಭದಲ್ಲಿ ಸ್ವದೇಶಿ ಜಾಗರಣಾ ಮಂಚ್ ಬೆಂ.ಗ್ರಾ. ಜಿಲ್ಲಾ ಸಂಚಾಲಕ ಆಂಜಿನಪ್ಪ, ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ಜಗದೀಶ್, ಗ್ರಾಮಪಂಚಾಯಿತಿ ಸದಸ್ಯರಾದ ಗೋವಿಂದರಾಜು, ತಿಮ್ಮೆಗೌಡ, ಪ್ರಸನ್ನಕುಮಾರ್, ಲಕ್ಷ್ಮೀದೇವಮ್ಮ ಬಸವರಾಜ್, ಹೋಬಳಿ ಬಿಜೆಪಿ ಅಧ್ಯಕ್ಷ ಕದಿರೇಗೌಡ, ಎಸ್ಸಿ ಮೋರ್ಚಾ ಕಾರ್ಯದರ್ಶಿ ಹರೀಶ್, ರೈತ ಯುವ ಮುಖಂಡರಾದ ಗಜೇಂದ್ರ ಪಾಳೇಗಾರ್, ಪ್ರಕಾಶ್ ರೆಡ್ಡಿ, ಸುಬ್ರಹ್ಮಣ್ಯ ಶರ್ಮ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..