ಬೆಂ.ಗ್ರಾ.ಜಿಲ್ಲೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2021-22 ನೇ ಸಾಲಿನಲ್ಲಿ ತೀವ್ರತರವಾದ ದೈಹಿಕ ವಿಕಲಚೇತನರು ಉದ್ಯೋಗ ಕೈಗೊಳ್ಳಲು ಅಥವಾ ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಯಂತ್ರಚಾಲಿತ ದ್ವಿಚಕ್ರವಾಹನವನ್ನು ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ತಾಲ್ಲೂಕು ವ್ಯಾಪ್ತಿಯ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ತಮ್ಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ, ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಪಡೆದು ಸಲ್ಲಿಸಬಹುದು
ವಿಕಲಚೇತನ ವ್ಯಕ್ತಿಗಳು ಭಾರತದ ಪ್ರಜೆಯಾಗಿದ್ದು, ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳು ವಾಸವಾಗಿರಬೇಕು. 20 ರಿಂದ 60ರ ವಯೋಮಾನದ ತೀವ್ರತರನಾದ ದೈಹಿಕ ವಿಕಲಚೇತನರಿಗೆ ಜೀವಿತ ಕಾಲದಲ್ಲಿ ಒಂದು ಬಾರಿ ಮಾತ್ರ ಸೌಲಭ್ಯ ಪಡೆಯಲು ಅವಕಾಶವಿದೆ. ಕುಟುಂಬದ ವಾರ್ಷಿಕ ಆದಾಯ 2 ಲಕ್ಷಗಳಿಗಿಂತ ಕಡಿಮೆಯಿರಬೇಕು.
ಅಂಗವಿಕಲರ ಅಧಿನಿಯಮದಲ್ಲಿ ಸೂಚಿಸಿರುವ ಹಾಗೂ ವೈದ್ಯಕೀಯ ಪ್ರಾಧಿಕಾರದಿಂದ ನೀಡಿರುವ ಗುರುತಿನ ಚೀಟಿಯೊಂದಿಗೆ ದೃಢೀಕೃತ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ಸಲ್ಲಿಸಬೇಕು. ಇತರ ಇಲಾಖೆಗಳ ಅಥವಾ ಸಂಘ ಸಂಸ್ಥಗಳಿಂದ ಯಂತ್ರಚಾಲಿತ ದ್ವಿಚಕ್ರವಾಹನ ಪಡೆದಿರುವುದಿಲ್ಲ ಎಂದು ರೂ. 20/-ಗಳ ಛಾಪಾ ಕಾಗದದಲ್ಲಿ ನೋಟರಿ ಸಲ್ಲಿಸಬೇಕು. ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಶೇ.75% ಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಾಗಿದ್ದು, ಎರಡು ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡಿರುವ, ಎರಡು ಕೈಗಳು ಸ್ವಾಧೀನದಲ್ಲಿರುವ ಹಾಗೂ ಇತರೆ ಎಲ್ಲಾ ರೀತಿಯಲ್ಲಿ ಸದೃಢವಾಗಿರುವ ವಿಕಲಚೇತನರಾಗಿರಬೇಕು.
ಈ ಸೌಲಭ್ಯ ಪಡೆಯಲಿಚ್ಚಿಸುವ ವಿಕಲಚೇತನರು ದ್ವಿಚಕ್ರವಾಹನ ಚಾಲನಾ ಪರವನಾಗಿ ಪತ್ರ ಪಡೆದಿರಬೇಕು.
ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮ ಪಂಚಾಯತಿಯ ವಿ.ಆರ್.ಡಬ್ಲ್ಯೂ./ತಾಲ್ಲೂಕು ಪಂಚಾಯತಿಯ ಎಂ.ಆರ್.ಡಬ್ಲ್ಯೂ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರ ಕಚೇರಿ, ಕೊಠಡಿ ಸಂಖ್ಯೆ: 03 ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ವಿಕಲಚೇತನರ ವಿಕಲಚೇತನರ ಸಹಾಯವಾಣಿ: 080-29787441 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..