ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಮಿತಿ ಮೀರಿದ್ದು, ಬೆಸ್ಕಾಂ ಸಿಬ್ಬಂದಿಗಳ ಬೇಜವಬ್ದಾರಿಗೆ ಗ್ರಾಹಕರು ಹಿಡಿ ಶಾಪ ಹಾಕುತ್ತಿದ್ದರೆ,ಮಳೆ ಇಲ್ಲದೆ ಕಂಗಾಲಾಗಿರುವ ರೈತರು ಪ್ರತಿಭಟನೆಗೆ ಸಿದ್ದತೆ ನಡೆಸುತ್ತಿದ್ದಾರೆ.
ತಾಲೂಕಿನ ದೊಡ್ಡಬೆಳವಂಗಲ, ಕಸಬಾ, ತೂಬಗೆರೆ, ಸಾಸಲು ಹೋಬಳಿಗಳ ಬಹುತೇಕ ಕಡೆ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿರುವುದು ಗ್ರಾಹಕರನ್ನು ಹೈರಾಣಾಗಿಸಿದೆ. ಮಳೆ ಮುನ್ಸೂಚನೆಯ ಎರಡು ಹನಿ ಬಿದ್ದ ಕೂಡಲೇ ವಿದ್ಯುತ್ ಕಡಿತ ಉಂಟಾಗುತ್ತಿದ್ದು, ನಿರಂತರ ಸಂಪರ್ಕ ಎಂಬುದು ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ.
ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂಬುದು ಗ್ರಾಹಕರ ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಆಧುನಿಕತೆ ಹೆಚ್ಚಾದಂತೆ ಗ್ರಾಮೀಣದಲ್ಲಿ ವಿದ್ಯುತ್ ಅಗತ್ಯತೆ ಜೀವನದ ಭಾಗವಾಗಿದೆ. ಅಡಿಗೆ, ಕುಡಿಯುವ ನೀರು, ಮೊಬೈಲ್ ಬಳಕೆ, ಕಚೇರಿಗಳ ಕಾರ್ಯ, ಇಂಟರ್ನೆಟ್ ಸೇವೆ, ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಅತೀ ಅನಿರ್ವಾರ್ಯವಾಗಿದೆ. ಆದರೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತವಾದಾಗ ತ್ವರಿತವಾಗಿ ಸ್ಪಂದಿಸದೇ ಲೈನ್ ಮೇನ್ ಗಳ ಮೇಲೆ ಅಥವಾ ಓಒರ್ ಲೋಡ್ ನೆಪದಲ್ಲಿ ನುಣಿಚಿಕೊಳ್ಳುತ್ತಿದ್ದಾರೆ ಎಂಬ ಆರೋಪ ತೀವ್ರವಾಗಿದೆ.
ಕಳೆದ ಕೆಲ ದಿನಗಳಿಂದ ಮಳೆ ಕೈಕೊಟ್ಟಿದ್ದು ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಬಿಸಿವೆ. ಇದರ ಬೆನ್ನಲ್ಲೇ ವಿದ್ಯುತ್ ಕಡಿತ ರೈತರಿಗೆ ಸಂಕಷ್ಟಕ್ಕೆ ತಂದೊಡ್ಡಿದ್ದು, ಬೆಸ್ಕಾಂ ಕಚೇರಿಯ ಬಳಿ ಪ್ರತಿಭಟನೆ ನಡೆಸುವ ಚಿಂತನೆ ನಡೆಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..