ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಉಪವಿಭಾಗದ ವಿವಿಧ ಠಾಣೆಗಳಲ್ಲಿ ವಿವಿಧ ಕಳವು ಪ್ರಕರಣಗಳಲ್ಲಿ ಪತ್ತೆಮಾಡಿರುವ ಒಟ್ಟು 41,21,744 ರೂಪಾಯಿ ಮೌಲ್ಯದ ಚಿನ್ನಾಭರಣ, ಲ್ಯಾಪ್ ಟಾಪ್ ಗಳು, ಮೊಬೈಲ್ ಪೋನ್ ಗಳು, ದ್ವಿಚಕ್ರ ವಾಹನಗಳು ಮತ್ತು ಸರಕು ಸಾಗಾಣಿಕೆ ವಾಹನಗಳನ್ನು ಚಿಕ್ಕಬಳ್ಳಾಪುರ ಪೋಲೀಸರು ವಶಪಡಿಸಿಕೊಂಡು ಮಾಲೀಕರಿಗೆ ವಿತರಿಸಲಾಗಿದೆ ಎಂದು ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕ ಎಂ.ಚಂದ್ರಶೇಖರ್ ತಿಳಿಸಿದರು.
ನಗರದ ಹೊರವಲಯದ ಅಣಕನೂರು ಬಳಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂತಾಮಣಿ ಉಪವಿಭಾಗದ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ 4.90 ಲಕ್ಷ ರುಪಾಯಿ ಮೌಲ್ಯದ 98 ಗ್ರಾಂ ತೂಕದ ಬಂಗಾರದ ಒಡವೆಗಳು, 45,000 ರೂ ಮೌಲ್ಯದ 2 ಲ್ಯಾಪ್ ಟಾಪ್, 34,000 ರುಪಾಯಿ ಮೌಲ್ಯದ 1 ಕಂಪ್ಯೂಟರ್, 14 ಲಕ್ಷ ರುಪಾಯಿ ಮೌಲ್ಯದ 56 ಬೋರ್ ವೆಲ್ ಬಿಟ್ ಗಳು ಹಾಗೂ 5.60 ಲಕ್ಷ ರುಪಾಯಿ ಮೌಲ್ಯದ ಬೊಲೆರೋ ಟೆಂಪೋ ಸೇರಿ ಒಟ್ಟು 25.29 ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ ಎಂದರು.
ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಸುಮಾರು 2,59,744 ರುಪಾಯಿ ಮೌಲ್ಯದ 18 ಮೊಬೈಲ್ ಪೋನ್ ಗಳು ಮತ್ತು 1 ಡಿವಿಆರ್ ನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ 10 ಲಕ್ಷ ರು. ಮೌಲ್ಯದ ಅಶೋಕ ಲೈಲ್ಯಾಂಡ್ ದೋಸ್ತ್ ವಾಹನ, ಅಪೇ ಆಟೋ, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ 85,000 ರು ಬೆಲೆ ಬಾಳುವ 1 ದ್ವಿಚಕ್ರ ವಾಹನ, ನಗರ ಠಾಣೆಯಲ್ಲಿ 83000 ರು. ಮೌಲ್ಯದ ಎರಡು ದ್ವಿಚಕ್ರ ವಾಹನ, ಬಟ್ಲಹಳ್ಳಿ ಠಾಣೆಯಲ್ಲಿ 2.50 ಲಕ್ಷ ರು. ಮೌಲ್ಯದ 54 ಗ್ರಾಂ ಬಂಗಾರದ ನಕ್ಲೇಸ್ ಮತ್ತು ಲಾಂಗ್ ಚೈನುಗಳನ್ನು ಪತ್ತೆ ಮಾಡಿ ಮಾಲೀಕರಿಗೆ ವಿತರಿಸಲಾಗಿದೆ ಎಂದರು.
ಇದೇ ವೇಳೆ ಕಳವು ಪ್ರಕರಣಗಳ ಪತ್ತೆಯಲ್ಲಿ ಉತ್ತಮ ಕೆಲಸ ಮಾಡಿದ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ಡಿವೈಎಸ್ ಪಿ ವಾಸುದೇವ್, ಚಿಂತಾಮಣಿ ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..