ದೊಡ್ಡಬಳ್ಳಾಪುರ: ಉತ್ತರ-ದಕ್ಷಿಣ ದಿಕ್ಕಿನಲ್ಲಿ ಸಾಗುತ್ತ ಗುಂಪುಗಾರಿಕೆ ನಡೆಸುತ್ತಿದ್ದ ತಾಲ್ಲೂಕಿನ ಜೆಡಿಎಸ್ ಮುಖಂಡರ ಬಣ ರಾಜಕೀಯಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಕ್ಕ ಬಾಣ ಬಿಡುವ ಮೂಲಕ ಅಂತ್ಯವಾಡಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಸಭೆಯ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಅಪ್ಪಯ್ಯ ಇಬ್ಬರು ಮುಖಂಡರು ಒಬ್ಬರಿಗೊಬ್ಬರು ಸಿಹಿ ತಿನ್ನಿಸುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಅಲ್ಲದೆ ತಾಲ್ಲೂಕಿನಲ್ಲಿ ಎಲ್ಲರೂ ಒಟ್ಟಾಗಿ ಪಕ್ಷ ಸಂಘಟಿಸುವ ಮೂಲಕ ನಗರಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಪಕ್ಷದ ಮುಖಂಡರು ತಿಳಿಸಿದ್ದಾರೆ.
ನಗರಸಭೆ ಚುನಾವಣೆಯ ‘ಬಿ’ ಫಾರಂ ಹಂಚಿಕೆ ವಿಚಾರದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಗಳನ್ನು ಕೊಡಿಸಲು ಮುಖಂಡರು ಲಾಭಿಗಳನ್ನು ನಡೆಸಿದ್ದರು. ಆದರೆ ಎಚ್.ಡಿ.ಕುಮಾರಸ್ವಾಮಿ ಅವರೇ ನಗರಸಭೆಯ ಎಲ್ಲಾ 31 ವಾರ್ಡ್ಗಳ ಬಗ್ಗೆ ಖಾಸಗಿ ಸಮೀಕ್ಷೆ ಮೂಲಕ ಮಾಹಿತಿ ಪಡೆದಿದ್ದು ಅಭ್ಯರ್ಥಿಗಳ ಕುರಿತು ವಿವರ ಸಂಗ್ರಹಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರೆ ಈ ಬಾರಿ ನಗರಸಭೆ ಚುನಾವಣೆಯ ‘ಬಿ’ ಫಾರಂ ಅಂತಿಮಗೊಳಿಸಿದ್ದಾರೆ ಎಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.
ಭಾನುವಾರ ನಗರದಲ್ಲಿನ ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಎಲ್ಲಾ ಮುಖಂಡರು ಸಭೆ ನಡೆಸಿ ‘ಬಿ’ಫಾರಂ ವಿತರಿಸಲಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ ಹೆಚ್ಚಿನ ಆಕಾಂಕ್ಷೆಗಳು ಇರುವ ಕ್ಷೇತ್ರಕ್ಕೆ ಇಬ್ಬರೂ ನಾಯಕರು ಚರ್ಚಿಸಿ ಸೋಮವಾರ ಮಧ್ಯಾಹ್ನ 12ಕ್ಕೆ ‘ಬಿ’ ಫಾರಂ ನೀಡಲು ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ.
ಆದಾಗ್ಯೂ ಭಿನ್ನಮತದ ಯಾವ ಮಟ್ಟಕ್ಕೆ ಶಮನವಾಗಿದೆ ಎಂಬುದು ಕಾರ್ಯಕರ್ತರಲ್ಲಿನ ಯಕ್ಷ ಪ್ರಶ್ನೆಯಾಗಿದೆ. ಕುಮಾರಸ್ವಾಮಿ ಮುಂದೆ ಸಿಹಿ ತಿನಿಸಿಕೊಂಡ ನಾಯಕರು, ಅವರ ಮಾತಿಗೆ ಮನ್ನಣೆ ನೀಡಿ ನಗರಸಭೆ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ ಶಾಶ್ವತವಾಗಿ ಬಣ ರಾಜಕೀಯಕ್ಕೆ ಅಂತ್ಯ ಹಾಡುವರೆ ಕಾದು ನೋಡಬೇಕಿದೆ.
ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮೀಪತಯ್ಯ, ಕಾರ್ಯಾಧ್ಯಕ್ಷ ಆರ್.ಕೆಂಪರಾಜ್ ಸೇರಿದಂತೆ ಮುಖಂಡರಾದ ತ.ನ.ಪ್ರಭುದೇವ್, ಹರೀಶ್ ಗೌಡ, ಕುಂಟನಹಳ್ಳಿ ಮಂಜುನಾಥ್ ಪಕ್ಷದ ಮುಖಂಡರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..