ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಪ್ತು ಚಟುವಟಿಕೆಯನ್ನು ಉತ್ತೇಜಿಸಲು ಕೈಗಾರಿಕೋದ್ಯಮಿಗಳು ಕ್ರಿಯಾಶೀಲರಾಗಿ ತಮ್ಮ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಭಾರತ ದೇಶದ 75ನೇ ವರ್ಷದ ಸ್ವಾತಂತ್ರೋತ್ಸವದ “ಆಜಾದಿ ಕಾ ಅಮೃತ್ ಮಹೋತ್ಸವ್” ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಸಹಭಾಗಿತ್ವದಲ್ಲಿ ಕ್ಲಾರ್ಕ್ ಎಕ್ಸೊಟಿಕಾ ಕಾನ್ವೆಕ್ಷನ್ ರೆಸಾರ್ಟ್ ನಲ್ಲಿಂದು ಒಂದು ದಿನದ “ಎಕ್ಸ್ ಪೋರ್ಟರ್ಸ್ ಕಾನ್‌ಕ್ಲೇವ್” ವಾಣಿಜ್ಯ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಉದ್ದಿಮೆದಾರರು ಹೆಚ್ಚು ಹೆಚ್ಚು ರಫ್ತು ಚಟುವಟಿಕೆಯನ್ನು ಹಮ್ಮಿಕೊಳ್ಳಲು ಸರ್ಕಾರವು ಎಲ್ಲಾ ರೀತಿಯ ಸೌಲಭ್ಯ ಮತ್ತು ಸೌಕರ್ಯವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ 100 ಕ್ಕೂ ಹೆಚ್ಚಿನ ಕೈಗಾರಿಕೆಗಳು ರಫ್ತು ಚಟುವಟಿಕೆಯನ್ನು ನಡೆಸುತ್ತಿದ್ದು, ಹೆಚ್ಚಿನ ಉದ್ಯೋಗಾವಕಾಶವನ್ನು ಸ್ಥಳೀಯರಿಗೆ ಒದಗಿಸಿದೆ. ಅದಾಗ್ಯೂ ಇನ್ನೂ ಹೆಚ್ಚಿನ ರೀತಿಯಲ್ಲಿ ರಫ್ತು ಚಟುವಟಿಯನ್ನು ಎಲ್ಲಾ ಕೈಗಾರಿಕೋದ್ಯಮಿಗಳು ಹಮ್ಮಿಕೊಂಡು ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಹಕಾರಿಯಾಗಬೇಕೆಂದು ತಿಳಿಸಿದರು.
ದೊಡ್ಡಬಳ್ಳಾಪುರ ಕೈಗಾರಿಕಾ ಸಂಘದ ಅಧ್ಯಕ್ಷರಾದ ಗುಲಾಟಿ ಅವರು ಮಾತನಾಡಿ, ಅಜಾದಿ ಕಾ ಅಮೃತ ಮಹೋತ್ಸವ್ ಕಾರ್ಯಕ್ರಮದ ಅಂಗವಾಗಿ ನಡೆದಂತಹ ಈ ವಾಣಿಜ್ಯ ಸಪ್ತಾಹ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಇರುವಂತಹ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚು ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸುವುದು ಮತ್ತು ಅದನ್ನು ರಫ್ತು ಚಟುವಟಿಕೆಯಾಗಿ ಅಭಿವೃದ್ದಿ ಪಡಿಸಿ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಎಲ್ಲಾ ಎಂ.ಎಸ್.ಎಂ.ಇ. ಘಟಕಗಳು ಸಹಕರಿಸಬೇಕೆಂದು ಹೇಳಿದರು.
ದಾಬಾಸ್‌ಪೇಟೆ ಕೈಗಾರಿಕಾ ಸಂಘದ ಅಧ್ಯಕ್ಷರಾದ ಎಸ್.ಕಂಠಪ್ಪ ಮಾತನಾಡಿ ವಾಣಿಜ್ಯ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದಂತಹ ಕೈಗಾರಿಕೋದ್ಯಮಿಗಳು ಮತ್ತು ರಫ್ತುದಾರರು ಸರ್ಕಾರವು ಒದಗಿಸಿರುವ ವಿವಿಧ ಯೋಜನೆಗಳ ಸೌಲಭ್ಯವನ್ನು ಪಡೆದುಕೊಂಡು, ಉತ್ತಮ ರೀತಿಯ ಚಟುವಟಿಕೆಯನ್ನು ನಡೆಸುವಂತೆ ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶವನ್ನು ಒದಗಿಸಲು ಸರ್ಕಾರದ ಜೊತೆ ಕೈಜೋಡಿಸಬೇಕೆಂದರು ಹಾಗೂ ಉದ್ಯೋಗ ಸಮಸ್ಯೆ ನಿವಾರಣೆಗೆ ಎಲ್ಲಾ ಕೈಗಾರಿಕೊದ್ಯಮಗಳು ಸಹಾಯ ಹಸ್ತ ನೀಡುವಂತೆ ಕೋರಿದರು.
ಹೊಸಕೋಟೆ ಕೈಗಾರಿಕಾ ವೆಲ್‌ಫೇರ್ ಫೋರಂನ ಅಧ್ಯಕ್ಷರಾದ ಕೃಷ್ಣಪ್ಪ ಮಾತನಾಡಿ ಸರ್ಕಾರದ ಈ ವಾಣಿಜ್ಯ ಸಪ್ತಾಹವು ಎಲ್ಲಾ ಉದ್ದಿಮೆದಾರರಿಗೆ ಅವಕಾಶವನ್ನು ಕಲ್ಪಿಸಿದ್ದು, ಇದರಿಂದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಎಫ್.ಕೆ.ಸಿ.ಸಿ.ಐ. ಹಾಗೂ ಸಿ.ಎಂ.ಡಿ ಸಿ.ವಿ.ಎನ್‌ವಿರೋ ಸಿಸ್ಟಮ್‌ನ ಮಾಜಿ ಅಧ್ಯಕ್ಷರಾದ ಡಾ|| ಜಾಕೋಬ್ ಕ್ರಾಸ್ಟ ಅವರು ಮಾತನಾಡಿ ಜಿಲ್ಲೆಯಲ್ಲಿರುವ ಎಲ್ಲಾ ಕೈಗಾರಿಕೋದ್ಯಮಗಳು ರಫ್ತು ನಿರ್ವಹಣೆಯನ್ನು ಮಾಡಲು ತಿಳಿಸಿದರಲ್ಲದೆ, ಪೂರಕವಾಗಿ ತಾವು ನಡೆಸುತ್ತಿರುವ ಚಟುವಟಿಕೆಯಲ್ಲಿ ದೇಶದ ರಕ್ಷಣಾ ಕ್ಷೇತ್ರದಲ್ಲಿ ಇರುವ ಮಿಸೈಲ್, ವಿಕ್ರಮ್, ಅಗ್ನಿ ಮತ್ತು ಇತರೆ ದೇಶದ ರಕ್ಷಣಾ ಉತ್ಪನ್ನಗಳನ್ನು ಈ ಸಂಸ್ಥೆಯ ಮುಖಾಂತರವಾಗಿ ಪ್ರದರ್ಶನ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು, ತನ್ನ ಉತ್ಪನ್ನಗಳನ್ನು ದೇಶದ ರಕ್ಷಣೆಗೆ ಮೀಸಲಿಡಲು ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ನರೇಂದ್ರಬಾಬು.ಎನ್. ಅವರು ಮಾತನಾಡಿ ಈ ಉತ್ಪನ್ನಗಳು ಪ್ರಮುಖವಾಗಿ ಅಮೇರಿಕಾ, ಇಂಗ್ಲೆಂಡ್, ಸಿಂಗಾಪುರ, ಮಲೇಷಿಯಾ, ಸೌದಿ ಅರೇಬಿಯಾ ದೇಶಗಳು, ಚೈನಾ, ಜರ್ಮನಿ, ರಷ್ಯಾ, ಸ್ಪೇನ್, ಕೆನಡಾ, ನೈಜೀರಿಯಾ, ಬಾಂಗ್ಲಾದೇಶ, ಥೈಲ್ಯಾಂಡ್, ಜಪಾನ್, ಯುರೋಪ್, ಇಟಲಿ, ಹಾಂಕಾಂಗ್, ಬ್ರೆಜಿಲ್, ಇತ್ಯಾದಿ ದೇಶಗಳಿಗೆ ರಫ್ತು ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಕಾರ್ಯತಂತ್ರ ರೂಪಿಸಲು ಜಿಲ್ಲಾಡಳಿತವು ಉದ್ದಿಮೆದಾರರಿಗೆ ಸೂಕ್ತ ನೆರವು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೈಗಾರಿಕಾ ಕೇಂದ್ರದ
ಉಪ ನಿರ್ದೇಶಕರಾದ ಕೆ.ಟಿ.ನಾರಾಯಣಸ್ವಾಮಿ ಅವರು ಮಾತನಾಡಿ ರಾಜ್ಯ ಸರ್ಕಾರವು 2020-25ರ ಕೈಗಾರಿಕಾ ನೀತಿಯಲ್ಲಿ ರಫ್ತು ಚಟುವಟಿಕೆಯನ್ನು ಪ್ರೋತ್ಸಾಹಿಸಲು ಹಲವಾರು ಉತ್ತೇಜನ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಕಲ್ಪಿಸಿದೆ. ಈ ಸೌಲಭ್ಯವನ್ನು ಜಿಲ್ಲೆಯ ರಫ್ತು ಕೈಗಾರಿಕೋದ್ಯಮಗಳು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ವಾಣಿಜ್ಯ ಸಪ್ತಾಹದಲ್ಲಿ ಜಿಲ್ಲೆಯ ಪ್ರಮುಖ ಕೈಗಾರಿಕೋದ್ಯಮಿಗಳು, ರಫ್ತುದಾರರು, ವಿವಿಧ ಕೈಗಾರಿಕಾ ಸಂಘದವರು, ವಿವಿಧ ಇಲಾಖೆಯವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..