ಬೆಂಗಳೂರು: ಸಾರ್ವಜನಿಕ ಪ್ರದೇಶದಲ್ಲಿ ನಿಯಮ ಬಾಹಿರವಾಗಿ ಸ್ಥಾಪಿಸಿರುವ ಬಾಬಾ ಸಾಹೇಬ್ ಅಂಬೇಡ್ಕರರ ಪ್ರತಿಮೆಯನ್ನು ಸ್ಥಳಾಂತರಿಸದ ಅಂಬೇಡ್ಕರ್ ಯುವ ಸಂಘಟನೆ ಅಧ್ಯಕ್ಷ ರೇವಣಸಿದ್ದಪ್ಪ ಅವರಿಗೆ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ದಾವಣಗೆರೆ ಜಿಲ್ಲೆಯ ಹಿರೇಮೇಗಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಸಾರ್ವಜನಿಕ ಪ್ರದೇಶದಲ್ಲಿ ಅನಧಿಕೃತವಾಗಿ ಸ್ಥಾಪಿಸಿರುವ ಅಂಬೇಡ್ಕರರ ಪ್ರತಿಮೆಯನ್ನು ಸ್ಥಳಾಂತರಿಸುವುದಾಗಿ ಡಾ. ಬಿ.ಆರ್ ಅಂಬೇಡ್ಕರ್ ಸಂಘಟನೆಯ ಅಧ್ಯಕ್ಷ ರೇವಣಸಿದ್ದಪ್ಪ 2021ರ ಆಗಸ್ಟ್ 9ರಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟು, ನಾಲ್ಕು ತಿಂಗಳಲ್ಲಿ ಪ್ರತಿಮೆ ಸ್ಥಳಾಂತರಿಸುವುದಾಗಿ ತಿಳಿಸಿದ್ದರು. ಇದಕ್ಕೆ ಸಮ್ಮತಿಸಿದ್ದ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಪಡಿಸಿತ್ತು. ಆದರೆ, ಭರವಸೆಯಂತೆ ಪ್ರತಿಮ ಸ್ಥಳಾಂತರಿಸದ ಹಿನ್ನೆಲೆಯಲ್ಲಿ ಸಂಘಟನೆ ಅಧ್ಯಕ್ಷರು ನ್ಯಾಯಾಲಯಕ್ಕೆ ಹಾಜರಾಗುವಂತೆ ಹೈಕೋರ್ಟ್ ನಿರ್ದೇಶಿಸಿ, ಸಮನ್ಸ್ ಜಾರಿ ಮಾಡಿದೆ ಎಂದು ಲೀಗಲ್ ನ್ಯೂಸ್ ವರದಿ ಮಾಡಿದೆ.
ಹಿನ್ನೆಲೆ: ಡಾ. ಬಿ.ಆರ್ ಅಂಬೇಡ್ಕರರ ಪ್ರತಿಮೆಯನ್ನು ಸಾರ್ವಜನಿಕ ಪ್ರದೇಶದಲ್ಲಿ ಅನಧಿಕೃತವಾಗಿ ಸ್ಥಾಪಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಮಹಾನ್ ಮಾನವತಾವಾದಿ, ನ್ಯಾಯಪರಿಪಾಲನೆಯನ್ನು ಅದಮ್ಯವಾಗಿ ನಂಬಿದ್ದ ಸಂವಿಧಾನ ಶಿಲ್ಪಿ ಅಂಬೇಡ್ಕರರ ಪ್ರತಿಮೆಯನ್ನು ಕಾನೂನು ಬಾಹಿರವಾಗಿ ಸ್ಥಾಪಿಸುವುದು ಅವರಿಗೆ ಮಾಡುವ ಅಪಮಾನ ಎಂದು ಬೇಸರ ವ್ಯಕ್ತಪಡಿಸಿತ್ತು. ಈ ವೇಳೆ ನ್ಯಾಯಾಲಯದ ಕ್ಷಮೆ ಕೋರಿದ್ದ ಸಂಘಟನೆ, ಪುತ್ಥಳಿ ಮರುಸ್ಥಾಪಿಸಲು ಸೂಕ್ತ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ಕೋರಿತ್ತು. ಆದರೆ, ಸರ್ಕಾರ ಸ್ಥಳ ನೀಡಲು ನಿರಾಕರಿಸಿತ್ತು. ನಂತರ, ಪುತ್ಥಳಿ ಸ್ಥಳಾಂತರಿಸುವುದಾಗಿ ಸಂಘದ ಪ್ರತಿನಿಧಿಗಳು ಆಗಸ್ಟ್ 9ರಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿ ಇತ್ಯರ್ಥಪಡಿಸಿದ್ದ ನ್ಯಾಯಾಲಯ ಡಿಸೆಂಬರ್ 17 ರೊಳಗೆ ಪ್ರತಿಮೆ ಸ್ಥಳಾಂತರಿಸಿ, ಅನುಪಾಲನಾ ವರದಿ ಸಲ್ಲಿಸುವಂತೆ ಆದೇಶಿಸಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….