ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಭತ್ತ, ರಾಗಿ, ತೊಗರಿ ಎಲ್ಲಕ್ಕೂ ಮಿತಿ ವಿಧಿಸಿರುವ ಸರ್ಕಾರದ ಅವೈಜ್ಞಾನಿಕ ನಿರ್ಧಾರವನ್ನು ಬದಲಿಸುವಂತೆ ಜ.10 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮಕ್ಕೆ ತರಲಾಗುವುದು. ನಮ್ಮ ಬೇಡಿಕೆಯ ಬಗ್ಗೆ ಸಕಾರಾತ್ಮಕ ಸ್ಪಧನೆ ದೊರೆಯದೇ ಇದ್ದರೆ ರಾಗಿ, ಭತ್ತ, ತೊಗರಿಯೊಂದಿಗೆ ಟ್ರ್ಯಾಕ್ಟರ್ಗಳಲ್ಲಿ ವಿಧಾನ ಸೌಧ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನಗರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದ ಮುಂದೆ ಐದು ದಿನಗಳಿಂದಲು ರಾಜ್ಯ ರೈತ ಸಂಘದ ಕಾರ್ಯಕರ್ತರು ನಡೆಸುತ್ತಿರುವ ಧರಣಿಯಲ್ಲಿ ಶುಕ್ರವಾರ ಮಾತನಾಡಿದರು.
ಸರ್ಕಾರವೇ ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂತಲು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ವರ್ತಕರು ಖರೀದಿಸಿದರೆ ಶಿಕ್ಷೆ ವಿಧಿಸುವ ಕಾನೂನಾತ್ಮಕ ಬಲ ಬೆಂಬಲ ಬೆಲೆ ಯೋಜನೆಗೆ ಇಲ್ಲದೇ ಹೋದ ಮೇಲೆ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿಯು ಸಹ ರೈತರಿಗೆ ಯಾವುದೇ ಉಪಯೋಗ ಇಲ್ಲ. ಸಣ್ಣ ಹಿಡುವಳಿ, ದೊಡ್ಡಹಿಡುವಳಿ ರೈತರು ಎಂದು ಇಬ್ಬಾಗ ಮಾಡುವ ಮೂಲಕ ರೈತರನ್ನು ಹೊಡೆದು ಆಳುವ ನೀತಿ ಅನುಸರಿಸಲು ನಾವು ಅವಕಾಶ ನೀಡುವುದಿಲ್ಲ. ರೈತ ಬೆಳೆದಿರುವ ಎಲ್ಲಾ ರಾಗಿ, ಭತ್ತ, ತೊಗರಿ, ಬಿಳಿ ಜೋಳವನ್ನು ಸರ್ಕಾರ ಖರೀದಿ ಮಾಡಬೇಕು. ಯಾವುದೇ ರೀತಿಯ ಮಿತಿಯನ್ನು ವಿಧಿಸಬಾರದು. ಸರ್ಕಾರ ಮಿತಿ ಸಡಿಲಗೊಳಿಸುತ್ತಿದ್ದಂತೆಯೇ ದಲ್ಲಾಳಿಗಳು ರೈತರಿಂದ ಹೆಚ್ಚಿನ ಬೆಲೆ ನೀಡಿ ತಾವಾಗಿಯೇ ಮುಂದೆ ಬಂದು ಖರೀದಿಸುತ್ತಾರೆ ಎಂದರು.
ಪ್ರತಿ ಬಾರಿಯ ಬಜೆಟ್ನಲ್ಲು ಬೆಂಬಲ ಬೆಲೆ ಯೋಜನೆಯಲ್ಲಿ ಧಾನ್ಯಗಳ ಖರೀದಿಗಾಗಿಯೇ ಆವರ್ತ ನಿಧಿಯನ್ನು ತೆಗೆದಿರಿಸಲಾಗುತ್ತದೆ. ಆದರೆ ಖರ್ಚು ಮಾಡಿರುವುದು ಇಲ್ಲಿಯವರೆಗೂ ಎಂದೂ ಸಹ ನೋಡಿಲ್ಲ. ಆವರ್ತ ನಿಧಿಯನ್ನು ತೋರಿಕೆಗಾಗಿ ಘೋಷಣೆ ಎನ್ನುವಂತಾಗಬಾರದು. ಪ್ರತಿ ವರ್ಷ ರೂ10 ಸಾವಿರ ಕೋಟಿ ಆವರ್ತ ನೀಧಿಯನ್ನು ಮೀಸಲಿಟ್ಟು ಖರ್ಚು ಮಾಡುವಂತಾಗಬೇಕು. ಇಡೀ ದೇಶದಲ್ಲಿಯೆಏ ನಮ್ಮ ರಾಜ್ಯದಲ್ಲಿ ಬೆಳೆಯ ವೈವಿಧ್ಯತೆ ಇದೆ. ಒಂದೊಂದು ಭಾಗದಲ್ಲೂ ಒಂದೊಂದು ರೀತಿಯ ಬೆಳೆಯನ್ನು ವಿಶೇಷವಾಗಿ ಬೆಳೆಯಲಾಗುತ್ತಿದೆ. ಈ ಬೆಳೆ ವೈಧ್ಯತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ರೈತರ ಮೇಲಷ್ಟೇ ಇಲ್ಲ. ಸರ್ಕಾರದ ಜವಾಬ್ದಾರಿಯು ಇದೆ ಎಂದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಮೋಹನಕುಮಾರಿ, ರಾಗಿ ಖರೀದಿ ಮಿತಿ ಸಡಿಲಿಸುವಂತೆ ಐದು ದಿನಗಳಿಂದಲು ರೈತರು ನಡೆಸುತ್ತಿರುವ ಧರಣಿಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನೋಂದಣಿಗೆ ನೂಕುನುಗ್ಗಲು ಉಂಟಾಗದಂತೆ ಸಾಸಲು, ತೂಬಗೆರೆಯ ರೈತ ಸಂಪರ್ಕ ಕೇಂದ್ರಗಳಲ್ಲೂ ನೋಂದಣಿ ಕೇಂದ್ರಗಳನ್ನು ತರೆಯುವ ಬಗ್ಗೆಯು ನಿರ್ಧರಿಸಲಾಗಿದೆ. ರಾಗಿ ಖರೀದಿ ಮಿತಿ ಸಡಿಲಿಕೆಯ ವಿಚಾರ ರಾಜ್ಯ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ ಎಂದರು.
ಧರಣಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.
ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ: ರಾಜ್ಯ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ರೈತ ಸಂಘದ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ತಾವು ಹಾಗೂ ಆಹಾರ ನಿಗಮದ ಅಧಿಕಾರಿಗಳು ಸಹ ಧರಣಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಮನವಿ ಸ್ವೀಕರಿಸಿ ಸರ್ಕಾರಕ್ಕೆ ತಿಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಎರಡು ದಿನಗಳ ಹಿಂದೆಯೇ ಮನವಿ ಸಲ್ಲಿಸಿದ್ದೆವು.
ಐದು ದಿನಗಳಿಂದಲು ರಾಗಿ ಖರೀದಿ ಕೇಂದ್ರದ ಮುಂದೆಯೇ ರಾತ್ರಿ ಹಗಲು ಧರಣಿ ನಡೆಸುತ್ತಿದ್ದರು ಸಹ ಸೌಜನ್ಯಕ್ಕಾದರು ಒಮ್ಮೆಯು ಭೇಟಿ ಮಾಡಿ ನಮ್ಮ ಕಷ್ಟಗಳನ್ನು ವಿಚಾರಿಸದೇ ಇರುವ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ವಿರುದ್ಧ ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….