ದೊಡ್ಡಬಳ್ಳಾಪುರ: ನಮ್ಮೂರಿನ ಕೆರೆ ನೀರನ್ನು ಶುದ್ಧವಾಗಿ ಉಳಿಸಿಕೊಳ್ಳುವುದಕ್ಕಾಗಿಯೇ ನಮ್ಮ ಹೋರಾಟ ಹೊರತು ಯಾರೊಬ್ಬರ ವಿರುದ್ಧವು ಅಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಖ್ಯಾತ ವೈದ್ಯ ಡಾ.ಟಿ.ಎಚ್. ಆಂಜಿನಪ್ಪ ಹೇಳಿದರು.
ಅವರು ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ಭಾನುವಾರ ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಕೆರೆ ಸಂರಕ್ಷಣಾ ವೇದಿಕೆ ವತಿಯಿಂದ ನಡೆದ ಹೋರಾಟದ ರೂಪುರೇಷೆ ಕುರಿತ ಸಭೆಯಲ್ಲಿ ಮಾತನಾಡಿದರು.
ಎರಡು ದಶಕಗಳ ನಂತರ ನಮ್ಮೂರಿನ ಕೆರೆ ಕೋಡಿ ಬಿದ್ದಿರುವುದನ್ನು ನೋಡಿ ಖುಷಿ ಪಟ್ಟಿದ್ದೆವು. ನಮ್ಮ ಜೀವಿತ ಕಾಲದಲ್ಲಿ ಮತ್ತೆ ಕೆರೆಗೆ ನೀರು ಬರುತ್ತವೆ ಎನ್ನುವ ನಂಬಿಯೇ ಇಲ್ಲದಾಗಿತ್ತು. ಆದರೆ ಕೆರೆಗೆ ನೀರು ಬಂದ ಮೂರೇ ತಿಂಗಳಲ್ಲಿ ಕೆರೆ ನೀರು ಕಲುಷಿತವಾಗಿರುವುದರ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ಬಂದಿರುವುದು ವಿಷಾದದ ಸಂಗತಿಯಾಗಿದೆ.
ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳು ನಮ್ಮಿಂದ ಕೆರೆ ನೀರು ಕಲುಷಿತವಾಗಿಲ್ಲ ಎನ್ನುತ್ತಿದ್ದಾರೆ. ಬಾಶೆಟ್ಟಿಹಳ್ಳಿ ಕೈಗಾರಿಕೆಗಳು ನಮ್ಮದು ತಪ್ಪಿಲ್ಲ ಅಂದರೆ ಕೆರೆ ನೀರು ಯಾರಿಂದ ಕಲುಷಿತವಾಗಿದೆ ಎಂದು ಪ್ರಶ್ನಿಸಿದ ಅವರು, ಯಾರದೇ ಮಾತನ್ನು ನಂಬುವ ಮುನ್ನ ನೀರಿನ ವೈಜ್ಞಾನಿಕ ಪರೀಕ್ಷೆ ನಡೆಯಬೇಕು. ಯಾವ ಭಾಗದ ಹಳ್ಳದ ಸಾಲಿನಿಂದ ಬರುತ್ತಿರುವ ನೀರಿನಿಂದ ನಮ್ಮೂರಿನ ಕೆರೆಯ ನೀರು ಕಲುಷಿತವಾಗುತ್ತಿದೆ ಎನ್ನವ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನಮ್ಮೂರಿನ ಕೆರೆಯ ನೀರು ಕಲುಷಿತಗೊಂಡಿರುವುದಕ್ಕೆ ನಿಖರ ಕಾರಣ ಹಾಗೂ ಪರಿಹಾರ ದೊರೆಯದ ಹೊರತು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕೆರೆಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಪಕ್ಷಾತೀತವಾಗಿದೆ. ಹೀಗಾಗಿ ನಮಗೆ ಯಶಸ್ಸು ದೊರೆಯಲಿದೆ ಎಂದರು.
ಕೆರೆಯ ನೀರು ಕಲುಷಿತವಾಗಿರುವುದರಿಂದ ಅಂತರ್ಜಲವು ಸಹ ಕಲುಷಿತವಾಗಿದ್ದು ಕೊಳವೆ ಬಾವಿಗಳಲ್ಲೂ ಶುದ್ದ ನೀರು ಬರುತ್ತಿಲ್ಲ. ಇದು ಕೇಲವ ಕುಡಿಯುವ ನೀರಿನ ಮೇಲಷ್ಟೇ ಅಲ್ಲದೆ ಕೃಷಿ ಬಳಕೆಯ ನೀರಿನ ಮೇಲೂ ಪರಿಣಾಮ ಬೀರಲಿದೆ. ರೈತರು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೇಶ್ ಮಾತನಾಡಿ, ನಗರಸಭೆ ವ್ಯಾಪ್ತಿಯಿಂದ ಚಿಕ್ಕತುಮಕೂರು ಕೆರೆಗೆ ಬರುತ್ತಿರುವ ಒಳಚರಂಡಿ ನೀರನ್ನು ಸೂಕ್ತ ರೀತಿಯಲ್ಲಿ ಶುದ್ದೀಕರಣ ಮಾಡಿದ್ದರೆ ಇಷ್ಟೆಲ್ಲಾ ತೊಂದರೆ ಉಂಟಾಗುತ್ತಿರಲಿಲ್ಲ. ಚಿಕ್ಕತುಮಕೂರು ಕೆರೆಯ ಸಮೀಪ ಸೂಕ್ತ ಸಾಮರ್ಥ್ಯ ಹೊಂದಿರುವ ಪಂಪ್ಗಳನ್ನು ಆಳವಡಿಕೆ ಮಾಡದೇ ಒಳಚರಂಡಿ ನೀರು ಕೆರೆಗೆ ಹರಿದು ಬಿಟ್ಟಿದ್ದಾರೆ. ನಮ್ಮ ಪಂಚಾಯಿತಿ ವತಿಯಿಂದಲು ಹಲವಾರು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದ್ದೇವೆ. ಆದರೆ ಈಗ ಹೋರಾಟಗಳು ಆರಂಭವಾದ ಮೇಲೆ ಪಂಪ್ಗಳನ್ನು ಅಳವಡಿಸಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳು ಯತ್ನಿಸುತ್ತಿದ್ದಾರೆ. ಕೆರೆ ಉಳಿವಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಪಂಚಾಯಿತಿ ವತಿಯಿಂದಲು ಬೆಂಬಲ ಸೂಚಿಸಲಾಗುವುದು. ಈ ಬಗ್ಗೆ ನಮ್ಮ ಪಂಚಾಯಿತಿ ಎಲ್ಲಾ ಸದಸ್ಯರು ಹಾಗೂ ಮುಖಂಡರೊಂದಿಗು ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ನಿವೃತ್ತ ಶಿಕ್ಷಕ ಚಿಕ್ಕಣಪ್ಪ, ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಪ್ರಭಾಕರ್, ದೊಡ್ಡತುಮಕೂರು ಗ್ರಾಮಪಂಚಾಯಿತಿ ಸದಸ್ಯ ಲೋಕೇಶ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….