ದೊಡ್ಡಬಳ್ಳಾಪುರ: ಮಕರ ಸಂಕ್ರಾತಿಯನ್ನು (Sankranti 2025) ಮಂಗಳವಾರ ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಮನೆಗಳ ಮುಂದೆ ಸಂಕ್ರಾಂತಿಯ ವಿಶೇಷ ಶುಭಾಶಯಗಳನ್ನು ಕೋರುವ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರವು ಹಬ್ಬಕ್ಕೆ ಮೆರುಗು ನೀಡಿವೆ. ಕಬ್ಬು, ಅವರೇ ಕಾಯಿ, ಕಡಲೇಕಾಯಿಗಳನ್ನು ಗೋವುಗಳಿಗೆ ನೇವೇದ್ಯ ಮಾಡಿ ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಎಲ್ಲ ದೇವಾಲಯ ಹಾಗೂ ಪ್ರವಾಸಿತಾಣಗಳಲ್ಲೂ ಜನ ಜಂಗುಳಿ ಹೆಚ್ಚಿತ್ತು.
ಘಾಟಿ ಕ್ಷೇತ್ರದಲ್ಲಿ ಭಕ್ತ ಸಾಗರ
ಅಂತೆಯೇ ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಮಸ್ಕರಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸಂಕ್ರಾಂತಿಯಂದು ಪ್ರತಿ ವರ್ಷದಂತೆ ಈ ಬಾರಿಯೂ ಸಂಜೆ ಕಾಟಿಮರಾಯನ ಹಬ್ಬದ ಆಚರಣೆಗೆ ಸಿದ್ಧತೆ ನಡೆದಿದೆ. ರೈತರು ತಮ್ಮ ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿಸುವ, ಅಚರಣೆಗೆ ಅಣಿಯಾಗುತ್ತಿದ್ದಾರೆ.