ನವದೆಹಲಿ, (News update): ಇಂದು ಬೆಳಗಿನ ಜಾವ ಸುಮಾರು 2.30 ಕ್ಕೆ ದುಷ್ಕರ್ಮಿಯಿಂದ ಇರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ (SaifAliKhan) ಆರೋಗ್ಯ ಸ್ಥಿರವಾಗಿದೆ.
ಡಾಕ್ಟರ್ ಉತ್ತಮಣಿ ಹೇಳಿದ್ ಇಷ್ಟು
ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಆಪರೇಷನ್ ಗಳು ನಡೆಸಲಾಗಿದೆ. ಪ್ರಸ್ತುತ ಮಾಹಿತಿ ಅನ್ವಯ ನಟ ಸೈಫ್ ಅಲಿ ಖಾನ್ ಆರೋಗ್ಯ ಸ್ಥಿರವಾಗಿದ್ದು, ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಸಿಓಓ ಡಾ ಉತ್ತಮಣಿ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸೈಫ್ ಅವರಿಗೆ ಚಾಕು ಇರಿತದ ಒಟ್ಟು 6 ಗಾಯಗಳಾಗಿದ್ದು ಅದರಲ್ಲಿ ಎರಡು ಚಿಕ್ಕ ಪ್ರಮಾಣದವು, ಎರಡು ಮಧ್ಯಂತರ ಮತ್ತು ಉಳಿದೆರಡು ಆಳವಾದ ಗಾಯಗಳು, ಅವರ ಬೆನ್ನಿಂದ ಸುಮಾರು ಎರಡೂವರೆ ಇಂಚು ಉದ್ದವಿರುವ ಚಾಕುವಿನ ತುಂಡನ್ನು ಸರ್ಜರಿ ಮೂಲಕ ತೆಗೆಯಲಾಗಿದೆ ಎಂದು ವೈದ್ಯ ಹೇಳಿದ್ದಾರೆ.
ಶಂಕಿತನ ಫೋಟೋ ಬಿಡುಗಡೆ
ಇದರ ಬೆನ್ನಲ್ಲೇ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ, ಚಾಕು ಇರಿದ ಪ್ರಕರಣದಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳನ್ನು ಮುಂಬೈ ಪೊಲೀಸರು ಗುರುತಿಸಿದ್ದಾರೆ. ಆ ಪೈಕಿ ಓರ್ವ ಶಂಕಿತನ ಫೋಟೋ ಮುಂಬೈ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ. ಸೈಫ್ ಕುಟುಂಬ ವಾಸವಾಗಿರುವ ಅಪಾರ್ಟ್ಮೆಂಟ್ನ ಮೆಟ್ಟಿಲುಗಳನ್ನು ಹತ್ತಿ ಬರುವಾಗ ಸಿಸಿಟಿವಿಯಲ್ಲಿ ಶಂಕಿತನ ವಿಡಿಯೋ ಸೆರೆಯಾಗಿದೆ.
ಶಂಕಿತ ವ್ಯಕ್ತಿಯು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದಾನೆ. ಆತ ಯಾರು? ಆತನ ಉದ್ದೇಶ ಏನಾಗಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದರೋಡೆಕೋರರು ನುಗ್ಗಿದ್ದನ್ನು ಮೊದಲು ನೋಡಿದ್ದು ಸೈಫ್ ಮನೆಯ ಕೆಲಸದವರು. ಕೂಡಲೇ ಅವರು ಸೈಫ್ ಅಲಿ ಖಾನ್ ಅವರನ್ನು ಎಚ್ಚರಿಸಿದರು.
ಈ ವೇಳೆ ಆಕ್ರಮಣ ಮಾಡಿದ ದರೋಡೆಕೋರನು ಸೈಫ್ ಅಲಿ ಖಾನ್‌ಗೆ 6 ಬಾರಿ ಚಾಕುವಿನಿಂದ ತಿವಿದಿದ್ದಾನೆ. ಬೆನ್ನು, ಕುತ್ತಿಗೆ, ಕೈ ಮುಂತಾದ ಭಾಗಗಳಿಗೆ ಗಾಯಗೊಳಿಸಿದ್ದಾನೆ. ಕೂಡಲೇ ಸೈಫ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆಟೋದಲ್ಲಿ ಆಸ್ಪತ್ರೆಗೆ..!
ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರನ್ನು ಪುತ್ರ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರ ಬಳಿ ಐಷಾರಾಮಿ ಕಾರುಗಳು ಇದ್ದರೂ ನಟನನ್ನು ಆಟೋದಲ್ಲಿ ಕರೆದೊಯ್ದಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ.
ಹೌದು. ಸ್ಟಾರ್ ಹೀರೋ ಆಗಿರುವ ಸೈಫ್ ಬಳಿ ಹಲವು ಐಷಾರಾಮಿ ಕಾರುಗಳು ಇವೆ. ಆದರೆ ಈ ಘಟನೆ ವೇಳೆ ತಂದೆಯನ್ನು ಆಸ್ಪತ್ರೆಗೆ ಸೇರಿಸಲು ಅವರ ಪುತ್ರ ಕಾರಿನ ಬದಲು ಆಟೋ ಬಳಸಿದ್ದಾರೆ.
ಅಪರಿಚಿತನ ದಾಳಿಯಿಂದ ರಕ್ತದ ಮಡುವಿನಲ್ಲಿದ್ದ ತಂದೆಯನ್ನು ನೋಡಿ ಪುತ್ರ ಇಬ್ರಾಹಿಂ ಶಾಕ್ ಆಗಿದ್ದಾರೆ. ತಕ್ಷಣ ಅವರು ಕಾರಿನಲ್ಲಿ ತಂದೆಯನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ಆದರೆ ಯಾವ ಕಾರುಗಳೂ ಸಿದ್ಧವಿರಲಿಲ್ಲ ಎನ್ನಲಾಗಿದೆ.
ಇನ್ನು ಕಾರಿಗೆ ಕಾಯುತ್ತಿದ್ದಾಗ ಇನ್ನೇನೋ ಅನಾಹುತ ಸಂಭವಿಸಬಹುದು ಎಂದು ಅರಿತ ಇಬ್ರಾಹಿಂ, ಮನೆಯ ಹೊರಗಡೆ ತೆರಳಿ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಸೈಫ್ ಅಲಿ ಖಾನ್ ವಾಸವಿರುವ ಸದ್ಗುರು ಶರಣ್ ಅಪಾರ್ಟ್‌ಮೆಂಟ್ ನಿಂದ ಲೀಲಾವತಿ ಆಸ್ಪತ್ರೆ ಕೇವಲ 1.6 ಕಿ.ಮೀ. ದೂರದಲ್ಲಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಆಟೋ ಸಿಕ್ಕಿದ್ದರಿಂದ ಅವರು ಆಸ್ಪತ್ರೆ ಸೇರಲು ಸಹಕಾರಿ ಆಯಿತು.
ಸದ್ಯ ಸೈಫ್ ಅವರಿಗೆ ಸರ್ಜರಿ ಪೂರ್ಣಗೊಂಡಿದ್ದು, ಚೇತರಿಸಿಕೊಳ್ಳುತ್ತಿದ್ದು, ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.