ಬೆಂ.ಗ್ರಾ.ಜಿಲ್ಲೆ: ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು (Harassment) ತಡೆಗಟ್ಟಲು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ, ಕೈಗಾರಿಕೆ, ಶಾಲಾ-ಕಾಲೇಜು, ಸಂಘ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿಯನ್ನು ಕಡ್ದಾಯವಾಗಿ ರಚಿಸಬೇಕು ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀ ಶೈಲ್ ಬಾಗಾಡಿ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ನವದೆಹಲಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಲೈಂಗಿಕ ದೌರ್ಜನ್ಯ /ಕಿರುಕುಳದಿಂದ ಮಹಿಳೆಯರ ರಕ್ಷಣೆ ಕುರಿತು ಸರ್ಕಾರದ ಅಧಿಕಾರಿ, ಸಿಬ್ಬಂದಿಗಳು, ಆಂತರಿಕ ದೂರು ನಿವಾರಣಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಒಂದು ದಿನದ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ಮಹಿಳೆಯರಿಗೆ ಘನತೆ ಮತ್ತು ಸುರಕ್ಷತೆಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ /ಕಿರುಕುಳ ತಡೆಗಟ್ಟಲು ಕೇಂದ್ರ ಸರ್ಕಾರ ‘ಪಾಶ್’ 2013 ಕಾಯ್ದೆಯಡಿ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕೆಂದು ಸೂಚಿಸಿದೆ, ಸಮಿತಿ ರಚಿಸದೇ ಇದ್ದ ಸಂದರ್ಭದಲ್ಲಿ ಆ ಸಂಸ್ಥೆಗೆ ದಂಡ ವಿಧಿಸುವ, ನೋಟಿಸ್ ನೀಡುವ ಅಥವಾ ಅವರ ಲೈಸೆನ್ಸ್ ರದ್ದು ಮಾಡುವ ಸಾಧ್ಯತೆ ಇರುತ್ತದೆ. ದೌರ್ಜನ್ಯ ಕಿರುಕುಳಕ್ಕೆ ಒಳಪಟ್ಟ ಮಹಿಳೆಯರು SHe-box Portal (ಶಿ ಬಾಕ್ಸ್) ಮೂಲಕ ದೂರು ದಾಖಲಿಸಬಹುದು ಎಂದರು.
ಕರ್ನಾಟಕ ಮಹಿಳಾ ಆಯೋಗದ ಕಾರ್ಯದರ್ಶಿ ಲತಾ ಅವರು ಮಾತನಾಡಿ ಸರ್ಕಾರಿ, ಅರೆ ಸರ್ಕಾರಿ, ಸಂಘಟಿತ, ಅಸಂಘಟಿತ ಹೀಗೆ ಯಾವುದೇ ಕೆಲಸದ ಸ್ಥಳದಲ್ಲಿ ‘ಪಾಶ್’ ಕಾಯ್ದೆಯಡಿ ಆಂತರಿಕ ದೂರು ಸಮಿತಿ ಇರಬೇಕಾದದ್ದು ಕಡ್ಡಾಯ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮುಖ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರೆ ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನೋಡಲ್ ಅಧಿಕಾರಿಗಳು ಇರುತ್ತಾರೆ.
ಕೆಲಸ ಮಾಡುವ ಮಹಿಳೆಯರು ಮುಂದಿನ ಭವಿಷ್ಯ ಇವುಗಳ ಕಾರಣಕ್ಕಾಗಿ ದೂರು ನೀಡಲು ಹಿಂಜರಿಯುವವರೇ ಹೆಚ್ಚು ಆಂತರಿಕ ಸಮಿತಿಯಲ್ಲಿ ಮಹಿಳೆಯರೇ ಇರುವುದರಿಂದ ಸಂತ್ರಸ್ತೆ ದೂರು ನೀಡಲು ಹಿಂಜರಿಯಬೇಕಿಲ್ಲ. ಈ ಸಮಿತಿ ವರದಿಯನ್ನಾಧರಿಸಿ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಜಿಲ್ಲೆಯಲ್ಲಿ ಕಾರ್ಖಾನೆಗಳು ಹೆಚ್ಚಿದ್ದು ಇದರಲ್ಲಿ ಮಹಿಳೆಯರೇ ಹೆಚ್ಚಾಗಿ ಕೆಲಸ ಮಾಡುತ್ತೀದ್ದಾರೆ ಅವರಿಗೆ ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳದ ಸ್ವರೂಪ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಉದ್ಯೋಗಿಗಳಿಗೆ ಸೂಕ್ತ ಮಾಹಿತಿ ಇರುವುದಿಲ್ಲ ಹಾಗಾಗಿ ಮಹಿಳೆಯರಿಗೆ ಅರಿವು ನೀಡುವುದು ಅತ್ಯಗತ್ಯ. ಹಾಗಾಗಿ ಸಂಬಂಧಪಟ್ಟ ಇಲಾಖೆಗಳು ಪಾಶ್ ಕಾಯ್ದೆಯ ಬಗ್ಗೆ ತಿಳಿಸಿ ಅದರ ಬಗ್ಗೆ ಅರಿವು ಮೂಡಿಸಿ ಎಂದರು.
ಜೊತೆಗೆ ಆಂತರಿಕ ದೂರು ಸಮಿತಿ ರಚಿಸಬೇಕು ಅದರಲ್ಲಿ ಸಂಸ್ಥೆಯ ಸದಸ್ಯರ ಜೊತೆಗೆ ಮಹಿಳೆಯರ ಬಗ್ಗೆ ಕಾಳಜಿ ಇರುವ ಪಾಶ್ ಕಾಯ್ದೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇರುವ ಸದಸ್ಯರನ್ನು ನೇಮಿಸಿಕೊಳ್ಳುಂತೆ ಸೂಚಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಡಾ.ಸ್ವಪ್ನ ಅವರು ಪಾಶ್ ಕಾಯ್ದೆಯ ಸಂಪೂರ್ಣ ಮಾಹಿತಿ ನೀಡಿದರು. ವಿಶಾಖಾ ಮಾರ್ಗಸೂಚಿಯ ಪರಿಣಾಮ ರೂಪುಗೊಂಡ ನಂತರ ಪಾಶ್ ಕಾಯ್ದೆ ಬಂದಮೇಲೆ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಕಿರುಕುಳ ತಡೆಗಟ್ಟಲು ಸಾಧ್ಯವಾಗುತ್ತಿದೆ ಇದರಿಂದ ಮಹಿಳೆ ತನ್ನ ಕಾರ್ಯಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ ಮುಕ್ತ ವಾತಾವರಣದಿಂದ ಕೆಲಸ ಮಾಡುವ ಮತ್ತು ಗೌರವದಿಂದ ಕಾರ್ಯನಿರ್ವಹಿಸುವ ಸ್ವಾತಂತ್ರ ಹೊಂದಿದ್ದಾಳೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ, ಯೋಜನಾ ನಿರ್ದೇಶಕರಾದ ವಿಠಲ್ ಕಾವ್ಳೆ, ಮಹಿಳಾ ಆಯೋಗದ ಉಪ ನಿರ್ದೇಶಕರಾದ ವಿಜಯ್ ಕುಮಾರ್, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮುದ್ದಣ, ಜಿಲ್ಲಾ ಮಟ್ಟದ ಅಧಿಕಾರಿಗಳು, ಆಂತರಿಕ ದೂರು ನಿವಾರಣಾ ಸಮಿತಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.