ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಶುಕ್ರವಾರ ಎನ್ಡಿಎ (NDA) ಜಂಟಿ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ (BJP), ಜೆಡಿಎಸ್ (JDS) ಮುಖಂಡರು ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ..
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿತಕ್ಕೆ ಸರಕಾರವೇ ನೇರ ಹೊಣೆ. ಕಾಂಗ್ರೆಸ್ ಹೈಕಮಾಂಡ್ ಗೆ ಮಾನ ಮರ್ಯಾದೆ, ಕನ್ನಡಿಗರ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ತಕ್ಷಣವೇ ಈ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಕಿತ್ತೆಸೆಯಬೇಕು ಎಂದು ಒತ್ತಾಯಿಸಿದರು.
ಹನ್ನೊಂದು ಜನರ ಸಾವಿಗೆ ಸಿಎಂ, ಡಿಸಿಎಂ ಹಾಗೂ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ಅವರೇ ಕಾರಣ. ಮಾತೆತ್ತಿದರೆ ನಾವು ಜನರ ಪರ ಎಂದು ರಾಗಾ ತೆಗೆಯುವ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇವರಿಂದ ರಾಜಿನಾಮೆ ಪಡೆಯಬೇಕು. ಮಾತೆತ್ತಿದರೆ ಸಿಎಂ ಗೋವಿಂದ.. ಗೋವಿಂದ.. ಎನ್ನುತ್ತಾರಲ್ಲ.. ಈ ದುರಂತಕ್ಕೆ ಮೂಲ ಪುರುಷನೇ ಆತ ಎಂದು ಕೇಂದ್ರ ಸಚಿವರು ಆರೋಪಿಸಿದರು.
ತಪ್ಪು ಮಾಡಿದ್ದು ಸರ್ಕಾರ, ಶಿಕ್ಷೆಗೆ ಗುರಿಯಾಗಿದ್ದು ಅಧಿಕಾರಿಗಳು. ದಕ್ಷ ಪೊಲೀಸ್ ಆಯುಕ್ತ ದಯಾನಂದ್ ಅವರೂ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಕೆಟ್ಟ ಸಂದೇಶ ನೀಡಿದೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಯಾವ ರೀತಿಯ ಸಂದೇಶ
ದಯಾನಂದ್ ಅವರು ಹೊಸ ವರ್ಷದ ಆಚರಣೆ, ಅನೇಕ ಕ್ರಿಕೆಟ್ ಪಂದ್ಯಗಳು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಅವರೇ ನಗರದ ಪೊಲೀಸ್ ಕಮೀಷನರ್ ಅಗಿದ್ದರು. ಹೊಸ ವರ್ಷದ ಹಿಂದಿನ ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಲಕ್ಷಾಂತರ ಜನ ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ವ್ಯವಸ್ಥೆ ಮಾಡಿದ್ದರು, ಅಂಥ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ ಇವರು ಯಾವ ರೀತಿಯ ಸಂದೇಶ ನೀಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ಎಂಬ ವ್ಯಕ್ತಿ ಇಷ್ಟೆಲ್ಲಾ ಸಾವು ನೋವುಗಳಿಗೆ ಕಾರಣ. ಅವರ ಬಗ್ಗೆ ಏನೇನೋ ಕಥೆಗಳನ್ನು ಹೇಳುತ್ತಾರೆ. ಸುತ್ತಲೂ ಸಿಎಂ ಅವರು ಎಂತಹ ವ್ಯಕ್ತಿಗಳನ್ನು ಇಟ್ಟುಕೊಂಡಿದ್ದಾರೆ ಎಂಬುದು ಪ್ರಶ್ನಾರ್ಹ. ರಾಜ್ಯದಲ್ಲಿ ಈ ಸರ್ಕಾರದ ಮಾನ ಮರ್ಯಾದೆ ಉಳಿಯಬೇಕು ಎನ್ನುವುದಾದರೆ ತಮ್ಮ ಸುತ್ತಮುತ್ತ ಇರುವ ಇಂತಹ ಕೆಟ್ಟ ಹುಳಗಳನ್ನು ಮೊದಲು ಕಿತ್ತು ಬಿಸಾಡಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸಂಕೋಚ ನಾಚಿಕೆ ಎನ್ನುವುದು ಇದ್ದರೆ
ಕಾಂಗ್ರೆಸ್ ಹೈಕಮಾಂಡ್ ಎನ್ನುವುದು ಇದ್ದರೆ, ಅದಕ್ಕೆ ಸಂಕೋಚ ನಾಚಿಕೆ ಎನ್ನುವುದು ಇದ್ದರೆ ಮೊದಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ತೆಗೆದು ಅವರ ಜಾಗಕ್ಕೆ ಸಭ್ಯರನ್ನು ತರಬೇಕು.
ಕುಮಾರಸ್ವಾಮಿ ಅವರು ಮಾತಾಡಿದರೆ ಅಸೂಯೆ ಎಂದು ಟೀಕೆ ಮಾಡುತ್ತಾರೆ. ನಾನು ಮಂತ್ರಿ ಆಗಿದ್ದೇನೆ. ಪ್ರಧಾನಿ ಮೋದಿ ಅವರು ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಅವರ ದೂರದೃಷ್ಟಿ ಅನುಸಾರ ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ನನಗೆ ಅಸೂಯೆ ಎನ್ನುವುದು ಯಾಕೆ ಬರುತ್ತದೆ ಎಂದು ಅವರು ಕುಟುಸಿದರು.
ಹೆಚ್‌ಎಂಟಿಗೆ ಕಾಯಕಲ್ಪ ನೀಡಲು ಪ್ರಯತ್ನ ಮಾಡುತ್ತಿದ್ದೇನೆ. ವೈಝಾಗ್ ಸ್ಟೀಲ್ ನಂತರ, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸೇಲಂ ಉಕ್ಕು ಕಾರ್ಖಾನೆಯನ್ನು ಪುನಶ್ಚೇತನ ಮಾಡುವ ಪ್ರಯತ್ನ ನಡೆಯುತ್ತಿದೆ. ಕುಮಾರಸ್ವಾಮಿ ಎಲ್ಲಿ ಹೆಚ್ ಎಂಟಿಯನ್ನು ಉಳಿಸಿಬಿಡುತ್ತಾನೋ ಎಂದು ಆ ಕಾರ್ಖಾನೆಯ ಒಳಿತಿಗಾಗಿ ಪ್ರಯತ್ನಿಸಿದ ಐಎಫ್‌ಎಸ್ ಅಧಿಕಾರಿಯನ್ನು ಅಮಾನತು ಮಾಡಿದೆ ಈ ಸರ್ಕಾರ.
ನನ್ನ ಅನುಭವದಲ್ಲಿ ಇಂತಹ. ಕೆಟ್ಟ ಸರ್ಕಾರವನ್ನು ನಾನು ಎಂದು ನೋಡಿಲ್ಲ, ಇಂತಹ ಕೆಟ್ಟ ಮುಖ್ಯಮಂತ್ರಿಯನ್ನು ಎಂದೂ ಕಂಡಿಲ್ಲ ಎಂದು ಕೇಂದ್ರ ಸಚಿವರು ಹರಿಹಾಯ್ದರು.
ಪ್ರಚಾರದ ಹಪಾಹಪಿ
ವರ್ಚಸ್ಸು ಹೆಚ್ಚಿಸಿಕೊಳ್ಳುವ, ಪ್ರಚಾರದ ಹಪಾಹಪಿಗೆ ಸಿಕ್ಕಿ ಸಿಎಂ, ಡಿಸಿಎಂ ಇಬ್ಬರೂ ಈ ದುರ್ಘಟನೆಗೆ ಕಾರಣರಾಗಿದ್ದಾರೆ. ಕನಕಪುರದ ಡಿಸಿಎಂ ಡಿಸಿಎಂ ಡಿ.ಕೆ. ಶಿವಕುಮಾರ್ ಶೋಕೊಡಲು ಹೋಗಿ ತಗುಲಿಕೊಂಡಿದ್ದಾರೆ. ಅವರು ಕೋರ್ಟ್‌ನಲ್ಲಿದ್ದರೂ, ಒಂದು ಕೇಸಿನ ನಿಮಿತ್ತ ಅವರು ಕನಕಪುರದ ಕೋರ್ಟ್ ನಲ್ಲಿ ಇದ್ದರು.
ರಾಯಲ್ ಚಾಲೆಂಜರ್ಸ್ ತಂಡ ಬೆಂಗಳೂರಿಗೆ ಬರುತ್ತಿದೆ. ತಂಡವನ್ನು ಸ್ವಾಗತಿಸಲು ಸಿಎಂ, ಮತ್ತವರ ಪಟಾಲಂ ಸಜ್ಜಾಗಿದೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ತಂಡಕ್ಕೆ ಸನ್ಮಾನ ಮಾಡಲು ಸಿಎಂ ಟೀಮ್ ನಿರ್ಧಾರ ಮಾಡಿದೆ ಎಂದು ಡಿಸಿಎಂ ಡಿಕೆಶಿಗೆ ಮಾಹಿತಿ ಹೋಗುತ್ತದೆ. ಇದರಿಂದ ಕೋರ್ಟ್ ನಲ್ಲಿಯೇ ಕಕ್ಕಾಬಿಕ್ಕಿಯಾದ ಡಿಕೆಶಿ, ಅಲ್ಲಿಂದಲೇ ನೇರವಾಗಿ ಕೈಯ್ಯಲ್ಲಿ ಆರ್ ಸಿಬಿ ಬಾವುಟ ಹಿಡಿದು ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬರುತ್ತಾರೆ ಎಂದು ಸಿಎಂ, ಡಿಸಿಎಂ ಅವರ ತಪ್ಪು ಹೆಜ್ಜೆಗಳನ್ನು ಕೇಂದ್ರ ಸಚಿವರು ಎಳೆಎಳೆಯಾಗಿ ಬಿಡಿಸಿಟ್ಟರು.
ಕಪ್ ಗೆದ್ದವರು ಆಟಗಾರರು. ಅದರೇ ಡಿಕೆಶಿಗೆ ತಾನೇ ಕಪ್ ಗೆದ್ದಷ್ಟು ಉಮೇದು. ಅಲ್ಲಿಂದಲೇ ಕಪ್ ಗೆ ಅವರಿಂದ ಮುತ್ತಿನ ಸುರಿಮಳೆ ಶುರುವಾಯಿತು. ಅಲ್ಲಿ ಡಿಸಿಎಂ ಅವರು ವಿರಾಟ್ ಕೊಹ್ಲಿಗೆ ಕನ್ನಡದ ಬಾವುಟ ಕೊಟ್ಟರು. ಆದರೆ ಡಿಸಿಎಂ ಅವರು ಕನ್ನಡ ಶಾಲು ಹಾಕಿಕೊಳ್ಳದೆ ಕುತ್ತಿಗೆಯ ಸುತ್ತ ವಿದೇಶಿ ಮಫ್ಲರ್ ಹಾಕಿದ್ದರು. ಆದರೆ, ಕೊಹ್ಲಿ ಪುನಾ ಆ ಕನ್ನಡ ಬಾವುಟವನ್ನು ಡಿಕೆಶಿಗೆ ವಾಪಸ್ಸು ಕೊಟ್ಟರು. ಇಷ್ಟೆಲ್ಲಾ ನಾಟಕ ಆಡುವ ಅಗತ್ಯ ಇದೆಯಾ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ವಿಧಾನಸೌಧ ಮೆಟ್ಟಿಲು ಮೇಲಿನ ವೇದಿಕೆಯಲ್ಲಿ ನಡೆದ ವಿಜಯೋತ್ಸವ ಸರ್ಕಾರಿ ಕಾರ್ಯಕ್ರಮ ಆಗಿರಲಿಲ್ಲ. ಮಂತ್ರಿಗಳ ಮಕ್ಕಳು, ಮೊಮ್ಮಕ್ಕಳು ಸೇರಿ ಕುಟುಂಬದ ಕಾರ್ಯಕ್ರಮ ಆಗಿತ್ತು. ಸನ್ ಗ್ಲಾಸ್ ಹಾಕಿಕೊಂಡು ಎಲ್ಲಾರೂ ಪೋಸ್ ಕೊಟ್ಟಿದ್ದೇ ಕೊಟ್ಟಿದ್ದು. ವೇದಿಕೆಯ ಮೇಲೆಯೇ ಡಿಕೆಶಿ ಒಬ್ಬರ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಿಡಿದು ಆಚೆ ತಳ್ಳಿದರು. ಇದೆಲ್ಲಾ ಏನು? ಅಸಹ್ಯ ಅಲ್ಲವೇ? ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಕಾಲುತುಳಿತದಲ್ಲಿ ಮೊದಲ ಸಾವು ಅಪರಾಹ್ನ 3.10ಕ್ಕೆ ಸಂಭವಿಸಿದೆ. ಆದರೆ, ಡಿ.ಕೆ.ಶಿವಕುಮಾರ್ ಮೈದಾನಕ್ಕೆ ಹೋಗಿ ಅಲ್ಲಿ ಕಪ್‌ಗೆ ಮುತ್ತಿಕ್ಕುತ್ತಿದ್ದರು. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ತಮ್ಮ ಮೊಮ್ಮಗನನ್ನು ಕರೆದುಕೊಂಡು ಹೋಗಿ ಜನಾರ್ದನ ಹೊಟೇಲ್‌ಗೆ ಮಸಾಲೆ ದೋಸೆ, ಹಲ್ವಾ ತಿನ್ನುತ್ತಿದ್ದರು.
ಸತ್ಯಮೇವ ಜಯತೆ ಅಂತಾರೆ. ಕಂಡೋರ ಮಕ್ಕಳ ಸಾವು ಇವರಿಗೆ ಸತ್ಯಮೇವ ಜಯತೇಯೇ? ಇವರಿಗೆ ನಾಚಿಕೆ ಆಗಬೇಕು. ಕೋರ್ಟ್ ಛೀಮಾರಿ ಹಾಕಿದ ಮೇಲೆ ಇವರಿಗೆ ಎಚ್ಚರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್ ಓರ್ವ ನಿಷ್ಕ್ರಿಯ ಸಚಿವರು. ಪಾಪ.. ಅವರು ಕೀಲುಗೊಂಬೆ ಇದ್ದಂತೆ. ಕೀ ಕೊಟ್ಟರೆ ಮಾತ್ರ ಮೇಲೆ ಏಳುತ್ತಾರೆ. ಇಲ್ಲವಾದರೆ ಇಲ್ಲ. ಅವರನ್ನು ನೋಡಿದರೆ ಪಾಪ ಎನಿಸುತ್ತದೆ ಎಂದು ಕುಟುಕಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಎಷ್ಟು ಜನ ಸೇರುತ್ತಾರೆ? ಎಂಬುದು ಸರಕಾರಕ್ಕೆ ಗೊತ್ತಿಲ್ಲವೇ? ಗುಪ್ತದಳ ಏನು ಮಾಡುತ್ತಿತ್ತು.
ಈ ಘಟನೆಯಲ್ಲಿ ಇಂಟಲಿಜೆನ್ಸ್ ತಪ್ಪಿದೆ ಎಂದು ಸರ್ಕಾರ ಒಪ್ಪಿಕೊಂಡರೂ ಅದರ ಮುಖಸ್ಥರನ್ನು ಸಸ್ಪೆಂಡ್ ಮಾಡಿಲ್ಲ ಯಾಕೆ? ಅವರು ಪ್ರಭಾವಶಾಲಿ ಎಂದಾ?ಅಥವಾ ಹೈಕಮಾಂಡ್ ಗೆ ಕೇಳಬೇಕಾ? ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಮಾಡುವ ಕೆಲಸ ಬಿಟ್ಟು ಜೆಡಿಎಸ್ ಬಿಜೆಪಿ ನಂಟು ಕಿತ್ತು ಹೋಗಲಿ ಎಂದು ಬಯಸುತ್ತಿದೆ. ಅದು ಎಂದಿಗೂ ಸಾಧ್ಯವಿಲ್ಲ. ನಮ್ಮಲ್ಲಿ ಒಳ್ಳೆಯ ಹೊಂದಾಣಿಕೆ ಇದೆ. ಬಿಜೆಪಿ ಹಾಗೂ ಜೆಡಿಎಸ್ ಚೆನ್ನಾಗಿ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿವೆ. ಈ ಸರ್ಕಾರದ ಅದಕ್ಷತೆಯ ಹನ್ನೊಂದು ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಎರಡು ಪಕ್ಷಗಳು ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.
ರಾಜೀನಾಮೆ ಕೊಡಬೇಕು
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಆರ್‍ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಎಫ್‍ಐಆರ್‍ನಲ್ಲಿ ಕೆಎಸ್‍ಸಿಎ, ಆರ್.ಸಿ.ಬಿ, ಮತ್ತು ಏಜೆನ್ಸಿಯಾದ ಡಿ.ಎನ್.ಎಯನ್ನು ಆರೋಪಿಗಳಾಗಿ ಹೆಸರಿಸಿದ್ದಾರೆ. ಸ್ವತಃ ಮುಖ್ಯಮಂತ್ರಗಳೇ ಆರೋಪಿ ನಂಬರ್ 1, ಉಪ ಮುಖ್ಯಮಂತ್ರಿಗಳು ಆರೋಪಿ ನಂಬರ್ 2, ಮಾನ್ಯ ಗೃಹ ಸಚಿವ ಪರಮೇಶ್ವರ್ ಅವರು ಆರೋಪಿ ನಂಬರ್ 3 ಎಂದು ವಾಗ್ದಾಳಿ ನಡೆಸಿದರು.
ಕಾಲ್ತುಳಿತ ಹಾಗೂ 11 ಜನ ಅಮಾಯಕರ ಸಾವಿನ ಸಂಬಂಧ ಕೊನೆಗೂ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ಕೇಸ್ ತೆಗೆದುಕೊಂಡು ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿದ ನಂತರ ಸರಕಾರ ಎಚ್ಚತ್ತುಕೊಂಡಿದೆ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿಗಳು, ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡುವ ಬದಲಾಗಿ ತಾವೇ ಜವಾಬ್ದಾರಿ, ನೈತಿಕ ಹೊಣೆ ಹೊತ್ತು ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ ಎಂದು ಮತ್ತೊಮ್ಮೆ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‍ಸಿಎ), ಆರ್.ಸಿ.ಬಿ, ಮತ್ತು ಏಜೆನ್ಸಿಯಾದ ಡಿ.ಎನ್.ಎಯನ್ನು ಪ್ರಮುಖವಾಗಿ ಆರೋಪಿಗಳೆಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಿದ್ದಾರೆ. ಎಫ್‍ಐಆರ್ ತರುವಾಯ, ಮುಖ್ಯಮಂತ್ರಿಗಳು ಏಕಾಏಕಿ ಜಾಗೃತರಾಗಿದ್ದಾರೆ. ಮುಖ್ಯಮಂತ್ರಿಗಳು ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರು ಕಮೀಷನರ್ ಸೇರಿ 5 ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಅರ್ಥಾತ್, ಮುಖ್ಯಮಂತ್ರಿಗಳು ಮೊನ್ನೆ ನಡೆದ ದುರ್ಘಟನೆ, 11 ಜನರ ಸಾವಿಗೆ ರಾಜ್ಯ ಸರಕಾರದಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಪೊಲೀಸರನ್ನು ಹರಕೆಯ ಕುರಿಯಾಗಿ ರಾಜ್ಯ ಸರಕಾರ ಮಾಡಿದೆ ಎಂದು ಆರೋಪಿಸಿದರು.
ತಪ್ಪಿಸಿಕೊಳ್ಳುವ ಷಡ್ಯಂತ್ರ
ಮುಖ್ಯಮಂತ್ರಿಗಳದು ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಿ ತಪ್ಪಿಸಿಕೊಳ್ಳುವ ಷಡ್ಯಂತ್ರ ಮುಖ್ಯಮಂತ್ರಿಗಳದು ಎಂದು ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು.
ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ವೈಫಲ್ಯಕ್ಕಾಗಿ ಬೇಹುಗಾರಿಕಾ ದಳದ ಅಧಿಕಾರಿಗಳನ್ನು ಯಾಕೆ ಅಮಾನತು ಮಾಡಿಲ್ಲ? ಎಂದು ಕೇಳಿದರು. ಬೇಹುಗಾರಿಕಾ ದಳ ನೇರ ಸಿಎಂ ಕೆಳಗಡೆ ಬರುತ್ತದೆ; ಅವರನ್ನು ಅಮಾನತು ಮಾಡಿದರೆ ಇದು ಮುಖ್ಯಮಂತ್ರಿಗಳ ಬುಡಕ್ಕೇ ಬರಲಿದೆ. ಆದ್ದರಿಂದ ಅವರನ್ನು ಅಮಾನತು ಮಾಡಿಲ್ಲ ಎಂದು ತಿಳಿಸಿದರು.
ನಾವು 30-40 ಸಾವಿರ ಜನರು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆವು. 2ರಿಂದ 3 ಲಕ್ಷ ಜನರು ಬಂದಿದ್ದಾರೆ. ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುವ ಮೂಲಕ ಬೇಹುಗಾರಿಕಾ ದಳದ ವೈಫಲ್ಯವನ್ನು ಸ್ವತಃ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪೊಲೀಸರಿಂದ ಅನುಮತಿ ನಿರಾಕರಣ
ನಿನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಹೆಮ್ಮೆಯ ಆರ್‍ಸಿಬಿ ತಂಡಕ್ಕೆ ಅಭಿನಂದನೆಗಳು. ರಾಜ್ಯ ಅತ್ಯಂತ ಹೆಮ್ಮೆ ಹಾಗೂ ಖುಷಿಪಡುವ ಕೆಲಸವನ್ನು ಆರ್‍ಸಿಬಿ ತಂಡ ಮಾಡಿದ್ದು, ಅವರನ್ನು ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅಭಿನಂದಿಸಲಿದ್ದೇವೆ. ಈ ಐತಿಹಾಸಿಕ ಕ್ಷಣದಲ್ಲಿ ನೀವೂ ಭಾಗಿಯಾಗಿ ಎಂದು ಸ್ವತಃ ಮುಖ್ಯಮಂತ್ರಿಗಳೇ ಸಾಮಾಜಿಕ ಜಾಲತಾಣದ ಮೂಲಕ ಕರೆ ಕೊಟ್ಟಿದ್ದರು.
3ರಂದು ಮ್ಯಾಚ್ ಆಗುವ ಮೊದಲೇ ಕೆಎಸ್‍ಸಿಎ, ಆರ್.ಸಿ.ಬಿ, ಮತ್ತು ಏಜೆನ್ಸಿಯಾದ ಡಿ.ಎನ್.ಎ ಕಡೆಯಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿದ್ದರು. ಸಂಭ್ರಮಾಚರಣೆಗೆ ಅನುಮತಿ ಕೋರಿದ್ದರು. ಲಕ್ಷೋಪಲಕ್ಷ ಆರ್‍ಸಿಬಿ ಅಭಿಮಾನಿಗಳು ಬರುವ ಕಾರಣ ನಾಳೆ ಸಂಭ್ರಮಾಚರಣೆಗೆ ಅನುಮತಿ ಕೊಡಲಾಗದು ಎಂದು ಪೊಲೀಸ್ ಅಧಿಕಾರಿಗಳು ಮುಚ್ಚಳಿಕೆ ಬರೆದುಕೊಟ್ಟಿದ್ದರು ಎಂದು ವಿವರಿಸಿದರು.
ಪೊಲೀಸ್ ಇಲಾಖೆ ಸಂಭ್ರಮಾಚರಣೆಗೆ ಅನುಮತಿ ಕೊಟ್ಟಿರಲಿಲ್ಲ. ಲಕ್ಷ ಲಕ್ಷ ಜನರು ಬರುವುದು ಗೊತ್ತಿದ್ದು ಹೀಗೆ ಹೇಳಿದ್ದಾರೆ. ಹಾಗಿದ್ದರೆ ರಾಜ್ಯ ಸರಕಾರಕ್ಕೆ ಯಾರು ಅನುಮತಿ ಕೊಟ್ಟರು ಎಂದು ಪ್ರಶ್ನಿಸಿದರು.
ವಿಧಾನಸೌಧದ ಬಳಿ ಲಕ್ಷ ಲಕ್ಷ ಜನ ಆರ್‍ಸಿಬಿ ಅಭಿಮಾನಿಗಳು ಬಂದಿದ್ದರು. ಅವರಿಗೆ ಯಾರ ಅನುಮತಿ ಇತ್ತು ಎಂದು ಕೇಳಿದರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನುಮತಿ ಕೊಟ್ಟಿರಲಿಲ್ಲ; ಕಾನೂನುಬಾಹಿರವಾಗಿ ಕಾರ್ಯಕ್ರಮ ನಡೆದಿದೆ ಎಂದು ಎಫ್‍ಐಆರ್ ಮಾಡಿದ್ದಾರೆ. ಅಲ್ಲಿ ಅನುಮತಿ ಇಲ್ಲದಿದ್ದರೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ, ಅಲ್ಲಿ ಸಂಭ್ರಮಾಚರಣೆಯಲ್ಲಿ ಯಾಕೆ ಭಾಗವಹಿಸಿದ್ದರು? ಅಲ್ಲಿ ಕಪ್ ಹಿಡಿದು ಮುತ್ತಿಕ್ಕುವ ಕೆಲಸವನ್ನು ಯಾಕೆ ಮಾಡಿದರು ಎಂದು ಕೇಳಿದರು.
ಸರಕಾರ ಕಿತ್ತು ಹಾಕಬೇಕೆಂಬ ಆಶಯ ಜನಸಾಮಾನ್ಯರದು
ಇವತ್ತು ಬೆಳಿಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆ ಬಳಿ ವಾಹನದಲ್ಲಿ ಬರುತ್ತಿದ್ದೆ. ಒಬ್ಬ ಆಟೋ ಚಾಲಕನನ್ನು ಮಾತನಾಡಿಸಿದೆ. ಏನ್ರೀ ವಿರೋಧ ಪಕ್ಷದವರು ನೀವಿದ್ದೀರಿ. ಪಾಪ 11 ಜನ ಅಮಾಯಕರು ಪ್ರಾಣ ಕಳಕೊಂಡಿದ್ದಾರೆ. ಈ ದರಿದ್ರ ಕಾಂಗ್ರೆಸ್ ಸರಕಾರವನ್ನು ನೀವು ಕಿತ್ತು ಹಾಕಬೇಕು ಎಂದು ಅವರು ಹೇಳಿದರು. ಇದು ಜನರ ಈಗಿನ ಆಶಯ ಎಂದು ಬಿ.ವೈ.ವಿಜಯೇಂದ್ರ ಅವರು ವಿವರಿಸಿದರು.
ಈ ವಿಜಯೋತ್ಸವ ಸರಕಾರಕ್ಕೆ ಯಾಕೆ ಬೇಕಿತ್ತು ಎಂದು ಕಾಂಗ್ರೆಸ್ಸಿನ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಪ್ರಶ್ನಿಸಿದ್ದಾರೆ. ಆರ್‍ಸಿಬಿ ಗೆಲುವು ಸಾಧಿಸಿದೆ ಎಂದು ರಾಜ್ಯ ಸರಕಾರ ಯಾಕೆ ಸಂಭ್ರಮಾಚರಣೆ ಮಾಡಿದೆ ಎಂದು ಕೇಳಿದ್ದಾರೆ. 11 ಜನರ ಸಾವಿಗೆ ರಾಜ್ಯ ಸರಕಾರವೇ ಉತ್ತರಿಸಬೇಕಿದೆ ಎಂದಿದ್ದಾಗಿ ಗಮನ ಸೆಳೆದರು.
ಶಿಕ್ಷೆಯಾಗುವವರೆಗೂ ಹೋರಾಟ
ವಿರೋಧ ಪಕ್ಷದ ನಾಯಕ ಆರ್ ಅಶೋಕ ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಡೆದ ಕಾಲ್ತುಳಿತದ ಘಟನೆಯಲ್ಲಿ ಸರ್ಕಾರವೇ ಅಪರಾಧಿ. ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಕಾನೂನನ್ನು ಕಗ್ಗತ್ತಲಿನಲ್ಲಿಟ್ಟಿದ್ದಾರೆ. ಗ್ರೇಟ್ ಸಮಾಜವಾದಿ, ಮಜಾವಾದಿ ಸಿದ್ದರಾಮಯ್ಯನವರಿಂದ ಹೀಗಾಗಿದೆ.
ಆರ್‌ಸಿಬಿ ತಂಡ ಐಪಿಎಲ್ ಗೆದ್ದಿದ್ದರೆ, ಕೆಪಿಸಿಸಿ ತಂಡ ಫೋಟೋಗೆ ಫೋಸ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬ್ಯಾಟ್ಸ್‌ಮನ್ ಹಾಗೂ ಡಿ.ಕೆ.ಶಿವಕುಮಾರ್ ಅವರೇ ಬೌಲರ್ ಆಗಿದ್ದಾರೆ.
ಸಿದ್ದರಾಮಯ್ಯನವರನ್ನು ಬೋಲ್ಡ್ ಮಾಡಬೇಕೆಂದು ಡಿ.ಕೆ.ಶಿವಕುಮಾರ್ ಪ್ರಯತ್ನ ಮಾಡುತ್ತಿದ್ದರೆ, ಐದು ವರ್ಷ ಸೆಂಚುರಿ ಹೊಡೆಯಬೇಕೆಂದು ಸಿಎಂ ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ರಾಜ್ಯದ ಜನರು ಹಿಟ್ ವಿಕೆಟ್ ಆಗಿದ್ದಾರೆ. 11 ಪ್ರತಿಭಾವಂತ ಯುವಜನರು ಬಲಿಯಾಗಿದ್ದಾರೆ ಎಂದು ದೂರಿದರು.
ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರ ಕೈಯಲ್ಲೇ ಟ್ರೋಫಿ ಇತ್ತು. ವರ್ಷಾನುಗಟ್ಟಲೆ ಶ್ರಮವಹಿಸಿ ಆಟವಾಡಿದ ಆಟಗಾರರನ್ನು ಮೂಲೆಗೆ ತಳ್ಳಿದ್ದರು. ಈ ಸಂಭ್ರಮಾಚರಣೆ ಆತುರದ ತೀರ್ಮಾನವೆಂದು ಕಾಂಗ್ರೆಸ್‌ನ ಕೆಲವರು ಹೇಳುತ್ತಿದ್ದಾರೆ. ಕಾಂಗ್ರೆಸ್‌ನ ಸಮರ್ಪಣಾ ಸಮಾವೇಶ ಮಾಡುವ ಮುನ್ನ, ಬೆಂಗಳೂರಿನಲ್ಲಿ ಪ್ರವಾಹ ಬಂದರೂ ಬಹಳಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಯುವಜನರಿಗೆ ಸಂಬಂಧಿಸಿದಂತೆ ಕ್ರೀಡಾ ಕಾರ್ಯಕ್ರಮ ಮಾಡುವಾಗ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಕಾಂಗ್ರೆಸ್‌ನ ಸಮಾವೇಶಕ್ಕೆ ಮಾಡಿದ್ದ ಸಿದ್ಧತೆಯ ಒಂದು ಪರ್ಸೆಂಟ್‌ನಷ್ಟು ಸಮಯವನ್ನು ಇಲ್ಲಿ ನೀಡಿದ್ದರೆ ಯುವಜನರ ಬದುಕು ಉಳಿಯುತ್ತಿತ್ತು ಎಂದರು.
ಆಯುಕ್ತರ ಅಮಾನತು
ಕರ್ನಾಟಕದ ಇತಿಹಾಸದಲ್ಲಿ ಮೊದಲ ಸಲ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಲಾಗಿದೆ. ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಜೊತೆಗಿದ್ದೇವೆ ಎಂದು ಹೇಳುತ್ತಿದ್ದಾರೆ. ಕಾಲ್ತುಳಿತಕ್ಕೆ ಸಿಲುಕಿ ನಿತ್ರಾಣರಾಗಿದ್ದ ಯುವಕ ಯುವತಿಯರನ್ನು ಪೊಲೀಸರು ಕೈಯಲ್ಲಿ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಇರಲಿಲ್ಲ. ಆದರೆ ಈಗ ಪೊಲೀಸರನ್ನೇ ಅಮಾನತು ಮಾಡಲಾಗಿದೆ. ನಾವು ನ್ಯಾಯ ಸಿಗುವವರೆಗೂ ರಾಜಕಾರಣ ಮಾಡುತ್ತೇವೆ. ಯಾರನ್ನೋ ಹರಕೆಯ ಕುರಿ ಮಾಡುವುದರ ವಿರುದ್ಧ ನಾವು ರಾಜಕಾರಣ ಮಾಡುತ್ತೇವೆ ಎಂದರು.
ಪೊಲೀಸ್ ಆಯುಕ್ತರಿಂದ ಅನುಮತಿ ನೀಡಲು ನಿರಾಕರಿಸಲಾಗಿತ್ತು, ಆದರೆ ಆರ್‌ಸಿಬಿ ಫ್ರಾಂಚೈಸಿಯವರು ಸಂಜೆ ಕಾರ್ಯಕ್ರಮ ಮಾಡಬೇಕೆಂದು ನಿರ್ಧರಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಬರೆಯಲಾಗಿದೆ. ಅಂದರೆ ಇದು ಅನಧಿಕೃತ ಕಾರ್ಯಕ್ರಮವಾಗಿದೆ. 144 ಸೆಕ್ಷನ್ ಹಾಕಿದ್ದರೆ ಕಾರ್ಯಕ್ರಮಕ್ಕೆ ಯಾರೂ ಬರುತ್ತಿರಲಿಲ್ಲ. ಇದು ಅನಧಿಕೃತ ಎಂದಮೇಲೆ ಆ ಸೆಕ್ಷನ್ ಹಾಕಿ ಕಾರ್ಯಕ್ರಮವನ್ನು ರದ್ದು ಮಾಡಬೇಕಿತ್ತು.
ಸರ್ಕಾರಕ್ಕೆ ಮುಜುಗರವಾಗಿದ್ದರಿಂದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ನಾವೆಲ್ಲರೂ ಸರ್ಕಾರವೇ ಅಪರಾಧಿ, ತಪ್ಪಿತಸ್ಥರೇ ಸರ್ಕಾರದವರು ಎಂದು ಹೇಳುತ್ತಿದ್ದೇವೆ. ಪ್ರಾಂಚೈಸಿಯವರಿಗೆ ಕಾರ್ಯಕ್ರಮ ಮಾಡು ಎಂದು ಸೂಚನೆ ನೀಡಿದವರು ಯಾರು? ಕ್ರಿಕೆಟಿಗರನ್ನು ಕರೆದುಕೊಂಡು ಬಂದವರು ಯಾರು? ಎಂದು ಪ್ರಶ್ನೆ ಮಾಡಿದರು.
ಎರಡು ಕಡೆ ಕಾರ್ಯಕ್ರಮ ನಡೆಸುವುದು ಬೇಡ ಎಂದು ಪೊಲೀಸರು ಹೇಳಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಘಟನೆ ನಡೆದಿಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಈ ಎರಡೂ ಸ್ಥಳಗಳು ಅಕ್ಕಪಕ್ಕದಲ್ಲೇ ಇವೆ. ಪೊಲೀಸರು ಅನುಮತಿ ನೀಡದಿದ್ದರೂ, ಕಾಂಗ್ರೆಸ್ ಸರ್ಕಾರ ಕಾನೂನು ಕೈಗೆ ತೆಗೆದುಕೊಂಡು ಕಾರ್ಯಕ್ರಮ ನಡೆಸಿದೆ. ಎಲ್ಲರೂ ಫೋಟೋ ಶೂಟ್‌ನಲ್ಲಿ ನಿರತರಾಗಿದ್ದರೇ ಹೊರತು, ಜನರ ಬಗ್ಗೆ ಯಾರೂ ಯೋಚಿಸಲಿಲ್ಲ ಎಂದರು.
ಸರ್ಕಾರವೇ ಅಪರಾಧಿ
ಮೊದಲು ಜಿಲ್ಲಾಧಿಕಾರಿಯಿಂದ ತನಿಖೆ ನಡೆಯಲಿದೆ ಎಂದು ಹೇಳಿದರು. ಮತ್ತೆ ಸಿಐಡಿಯಿಂದ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ. ಇದು ಕೂಡ ಮುಡಾ, ವಾಲ್ಮೀಕಿ ನಿಗಮದ ಹಗರಣದಂತೆಯೇ ಮುಚ್ಚಿಹೋಗಲಿದೆ.
ಇಲ್ಲಿ ಸರ್ಕಾರವೇ ಅಪರಾಧಿಯಾಗಿರುವುದರಿಂದ, ಸರ್ಕಾರದಲ್ಲಿರುವ ಯಾರೂ ತನಿಖೆ ಮಾಡಬಾರದು. ಇದನ್ನು ನ್ಯಾಯಾಧೀಶರೇ ತನಿಖೆ ಮಾಡಬೇಕು. ಅನುಮತಿ ನೀಡಲು ಒತ್ತಡ ಹೇರಿದವರು ಯಾರು, ಕಾರ್ಯಕ್ರಮ ನಡೆಸಲು ಸೂಚನೆ ನೀಡಿದವರು ಯಾರು ಎಂಬುದು ಗೊತ್ತಾಗಬೇಕಿದೆ. ಅಲ್ಲಿಯವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಳ ಮಲ್ಲೇಶ್ ಬಾಬು, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ರವಿಕುಮಾರ್, ಹರೀಶ್ ಪೂಂಜಾ, ಮಾಜಿ ಶಾಸಕರಾದ ಹೆಚ್.ಎಂ. ರಮೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ ಮುಂತಾದವರು ಭಾಗಿಯಾಗಿದ್ದರು.